ಹಿಂದಿ ಹೇರಿಕೆ ವಿರುದ್ಧ ಜನಜಾಗೃತಿ; ಕೆಪಿಸಿಸಿ ವಕ್ತಾರೆ ಯು.ಟಿ. ಫರ್ಜಾನ ಮನವಿ

ut farzana
Published on

ಮಂಗಳೂರು: ಹಿಂದಿಯನ್ನು 2047ರೊಳಗೆ ರಾಷ್ಟ್ರ ಭಾಷೆಯಾಗಿ ಪ್ರತಿಷ್ಠಾಪಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಂಡಗಳನ್ನು ರಚಿಸುವ ವಿಷಯ ಪ್ರಸ್ತಾಪಿಸಿದ್ದಾರೆ. ಇದು ಕನ್ನಡಿಗರನ್ನು ಕರ್ನಾಟಕದಲ್ಲೇ ದ್ವಿತೀಯ ದರ್ಜೆಯ ಪ್ರಜೆಗಳನ್ನಾಗಿಸುವ ಪ್ರಯತ್ನ. ಕನ್ನಡ ರಾಜ್ಯೋತ್ಸವ ಸಂದರ್ಭ ಎಲ್ಲ ರಾಜಕೀಯ ಪಕ್ಷ, ಇತರ ಸಂಘಟನೆಗಳು ಅಭಿಪ್ರಾಯ ಬೇಧ ಮರೆತು ಕನ್ನಡಿಗರಿಗೆ ಆಗುವ ಅನ್ಯಾಯ ಬಗ್ಗೆ ಜನಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರೆ ಯು.ಟಿ. ಫರ್ಜಾನ ಮನವಿ ಮಾಡಿದರು.

ಹಿಂದಿ ಹೇರಿಕೆಯು ಒಕ್ಕೂಟ ವ್ಯವಸ್ಥೆಯ ಮೇಲೆ ನಡೆಯುವ ಹಲ್ಲೆಯಾಗಿದೆ. ಭಾಷಾವಾರು ಏಕೀಕರಣದ ವೇಳೆ ತಮಿಳುನಾಡಿನಲ್ಲಿ ತಮಿಳರು, ಆಂಧ್ರದಲ್ಲಿ ತೆಲುಗಿನವರು ಒಂದಾದರು. ಆದರೆ ಕಳೆದ 75 ವರ್ಷಗಳಲ್ಲಿ ಕರ್ನಾಟಕದಲ್ಲಿ ಏಕೀಕರಣಕ್ಕೆ ಇನ್ನೂ ನಾವು ಕಷ್ಟ ಪಡುತ್ತಿದ್ದೇವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ದಕ್ಷಿಣದ ರಾಜ್ಯಗಳು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಪ್ರಗತಿ ಸಾಧಿಸಿವೆ. ಆದ್ದರಿಂದ ಉತ್ತರದಿಂದ ದಕ್ಷಿಣಕ್ಕೆ ಅವ್ಯಾಹತವಾಗಿ ವಲಸೆ ನಡೆಯುತ್ತಿದೆ.ಇದರಿಂದ ನಮ್ಮ ನೆಲದಲ್ಲಿ ಕೈಗಾರಿಕೆ ಸಹಿತ ಎಲ್ಲ ಕ್ಷೇತ್ರಗಳಲ್ಲಿ ಅವರಿಗೆ ಉದ್ಯೋಗ ನೀಡಲು ನಾವು ಅವರ ಭಾಷೆಯನ್ನು ಕಲಿಯಬೇಕಾದ ಅನಿವಾರ್ಯತೆ. ಅವರು ನಮ್ಮ ದಕ್ಷಿಣ ಭಾರತದ ಯಾವುದೇ ಭಾಷೆಗಳನ್ನು ಕಲಿಯುವುದಿಲ್ಲ ಎಂದು ಅವರು ವಿವರಿಸಿದರು.

ಈ ಪರಿಸ್ಥಿತಿಯಲ್ಲಿ ದೇಶದ ಸಮಗ್ರತೆಯ ಬಗ್ಗೆ ಚಿಂತನೆ ಉಳ್ಳ ನಾಡಿನ ಪ್ರಜ್ಞಾವಂತ ಜನರು ಪಕ್ಷಾತೀತವಾಗಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಪ್ರತಿರೋಧ ಮಾಡದಿದ್ದರೆ ಉಳಿಗಾಲವಿಲ್ಲ.ಕರ್ನಾಟಕ 7 ಕೋಟಿ ಜನಸಂಖ್ಯೆ ಇರುವ ರಾಜ್ಯ, ತಲಾವಾರು ಜಿಎಸ್‌ಟಿ, ವಿದೇಶಿ ರಫ್ತುವಿನಲ್ಲೂ ರಾಜ್ಯಮುಂಚೂಣಿಯಲ್ಲಿದೆ. ಸರಕು ಮತ್ತು ಸಾಗಾಣಿಕೆಯಲ್ಲಿ ನಾಲ್ಕನೇ ಸ್ಥಾನ, ಸೇವಾ ತೆರಿಗೆಯಲ್ಲಿ ನಾವು ಮೊದಲಿಗರು. ಇಷ್ಟೆಲ್ಲ ದೇಶಕ್ಕೆ ಕೊಡುಗೆ ನೀಡುತ್ತಿರುವ ನಾವು ಎರಡನೆ ದರ್ಜೆಯ ಪ್ರಜೆಗಳಾಗಿ ಬಾಳಬೇಕೇ ಎಂದು ಪ್ರಶ್ನಿಸಿದರು.

ಗೋಷ್ಠಿಯಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಸಂಸದ ಬಿ. ಇಬ್ರಾಹಿಂ, ಮುಖಂಡರಾದ ಕೋಡಿಜಾಲ್ ಇಬ್ರಾಹಿಂ, ಕೆ. ಅಪ್ಪಿ, ರೂಪ ಪೂಜಾರಿ, ಚಂದ್ರಕಲಾ ಜೋಗಿ, ತನ್ವೀರ್ ಶಾ, ಕವಿತಾ ವಾಸು, ಸಬಿತಾ ಮಿಸ್ಕಿತ್, ಲಕ್ಷ್ಮಿ ನಾಯರ್, ನಜೀರ್ ಬಜಾಲ್, ಸಬೀರ್ ಎಸ್. ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net