ಹಿಂಗಾರು ಮಳೆಯಿಂದ ರೈತನ ಕೈಹಿಡಿದ ರಾಗಿ ಬೆಳೆ / ಕಟಾವಿಗೆ ಬಂದಿರುವ ರಾಗಿ ಬೆಳೆ / ರೈತನ ಕೈ ಬಿಟ್ಟ ನೆಲಗಡಲೆ / ತೊಗರಿ ಅವರೆ ಬಂಪರ್ / ಅವರೆಗೆ ಮಾರುಕಟ್ಟೆ ವ್ಯವಸ್ಥೆ ಇಲ್ಲ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಈ ವರ್ಷ ಮುಂಗಾರು ಮಳೆ ಪ್ರಾರಂಭದಲ್ಲಿ ಕೈಕೊಟ್ಟರೂ ಹಿಂಗಾರು ಮಳೆ ಕೈಹಿಡಿದ ಕಾರಣ ರಾಗಿ, ತೊಗರಿ, ಅವರೆ ಬೆಳೆಗಳು ರೈತನ ಕೈಹಿಡಿದಿವೆ. ನೆಲಗಡಲೆ ಮಾತ್ರ ಶೇ.೫೦ ರಷ್ಟು ಬೆಳೆ ಬಂದಿದೆ. ಅವರೆ ಇತ್ತೀಚೆಗೆ ಜಿಲ್ಲೆಯಲ್ಲಿ ಪ್ರಮುಖ ಬೆಳೆಯಾಗಿದ್ದು, ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ರೈತರು ಪರದಾಡುವಂತಾಗಿದೆ.

ರಾಗಿ ಬೆಳೆ ಇನ್ನೇನು ಕಟಾವಿಗೆ ಬಂದಿದೆ. ಉಳಿದಂತೆ ತೊಗರಿ ಕಾಯಿ ಕಚ್ಚುತ್ತಿದೆ. ಅವರೆ ಹೂವು ಬಂದಿದ್ದು, ೧೫ ದಿನಗಳೊಳಗಾಗಿ ಕಾಯಿ ಕಚ್ಚಲಿದೆ. ಸಂಕ್ರಾAತಿ ವೇಳೆಗೆ ಅವರೇಕಾಯಿ ಸುಗ್ಗಿ ಕಾಣಿಸಿಕೊಳ್ಳಲಿದೆ.

ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಮಳೆ ಕೈಕೊಟ್ಟ ಕಾರಣ ರಾಗಿ ಬೆಳೆ ಒಣಗಿದ್ದರಿಂದ ಪೂರ್ಣ ಪ್ರಮಾಣದ ಬೆಳೆ ಕಾಣಲು ಸಾಧ್ಯವಾಗಲಿಲ್ಲ. ಶೇ.೬೫ ರಿಂದ ೭೦ ರಷ್ಟು ಬೆಳೆಯ ಫಸಲು ರೈತನ ಕೈಗೆ ಸಿಗುವಂತಾಗಿದೆ. ಪ್ರಾರಂಭದಲ್ಲಿ ಬಿತ್ತಿದ ರಾಗಿ ತೆನೆ ಕೊಯ್ಯವ ಹಂತಕ್ಕೆ ಬಂದಿದ್ದು, ಕೆಲವು ರೈತರು ಈಗಾಗಲೇ ತೆನೆಯನ್ನು ಕಟಾವು ಮಾಡುತ್ತಿದ್ದಾರೆ.

ಹಿಂಗಾರು ಮಳೆಗೆ ಬಿತ್ತನೆ ಮಾಡಿರುವ ರಾಗಿ ಬೆಳೆಗೆ ಸ್ವಲ್ಪ ಹಿನ್ನಡೆಯಾಗಿದ್ದು, ಇನ್ನು ಸ್ವಲ್ಪ ಮಳೆ ಬೇಕಾಗಿದ್ದರು ಮಂಜು ಮತ್ತು ಚಳಿ ಬೀಳುತ್ತಿರುವುದರಿಂದ ಪೂರ್ಣಪ್ರಮಾಣದ ಬೆಳೆಯಾಗಲಿದೆ ಎಂದು ರೈತರು ಹೇಳುತ್ತಿದ್ದಾರೆ.

ತೊಗರಿ ಬೆಳೆಯಲ್ಲಿ ಈಗಾಗಲೇ ಕಾಯಿ ಕಾಣಿಸಿಕೊಂಡಿದ್ದು, ಮಳೆ ಇಲ್ಲದಿದ್ದರೂ ಭೂಮಿಯಲ್ಲಿ ತೇವಾಂಶ ಇರುವ ಕಾರಣ ಇರುವ ಕಾಯಿ ರೈತನ ಕೈಗೆ ಸಿಗಲಿದೆ. ಮಳೆ ಬಂದರೂ ಪರವಾಗಿಲ್ಲ, ಬರದಿದ್ದರೂ ಇರುವ ಹೂವು ಮತ್ತು ಕಾಯಿ ರೈತನ ಕೈಗೆ ಸಿಗಲಿದೆ. ಶೇ.೮೦ ರಷ್ಟು ಫಸಲು ಕಾಣಬಹುದಾಗಿದೆ.

ಅವರೇ ಗಿಡಕ್ಕೆ ಮಳೆ ಇಲ್ಲದಿದ್ದರೂ ಇರುವ ತೇವಾಂಶಕ್ಕೆ ಹಾಗೂ ಮಂಜು ಮತ್ತು ಚಳಿಗೆ ಇರುವ ಬಿಡುವ ಹೂವು ಕಾಯಿ ಕಚ್ಚಿಕೊಳ್ಳುತ್ತದೆ. ಚಳಿ ಹೆಚ್ಚಾದಷ್ಟು ಅವರೆ ಗಿಡದಲ್ಲಿ ಹೆಚ್ಚು ಫಸಲನ್ನು ಕಾಣಬಹುದಾಗಿದೆ. ಕೋಲಾರ ಜಿಲ್ಲೆಯಲ್ಲಿ ರಾಗಿಯಷ್ಟೇ ಅವರೇಕಾಯಿಯನ್ನು ಇತ್ತೀಚೆಗೆ ಹೆಚ್ಚಾಗಿ ಬೆಳೆಯುತ್ತಿದ್ದಾರೆ.

ಮಾರುಕಟ್ಟೆ ವ್ಯವಸ್ಥೆ ಇಲ್ಲ :

ಜಿಲ್ಲೆಯಲ್ಲಿ ಅವರೇಕಾಯಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಆದರೆ ಜಿಲ್ಲಾಡಳಿತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಲ್ಲ. ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಹೆಚ್ಚಾಗಿ ಅವರೇಕಾಯಿ ಬೆಳೆಯುತ್ತಾರೆ. ಹೊಸಕೋಟೆ, ಕೆ.ಜಿ.ಎಫ್. ಬೆಂಗಳೂರು ಮುಂತಾದ ಕಡೆ ಶ್ರೀನಿವಾಸಪುರದಿಂದಲೇ ಅವರೇಕಾಯಿ ಆಮದು ಮಾಡಲಾಗುತ್ತದೆ. ಆದರೆ ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಪರಿದಾಡುವಂತಾಗಿದೆ.

ಬಾಕ್ಸ್

ಜಿಲ್ಲೆಯಲ್ಲಿ ೬೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ರಾಗಿಯನ್ನು ಬೆಳೆಯಲಾಗಿದೆ. ಅವರೆ ಬೆಳೆಯು ಸುಮಾರು ೧೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಇದರ ಮಧ್ಯೆ ತೊಗರಿ ೨.೧೦೯ ಹೆಕ್ಟೇರ್ ಮತ್ತು ನೆಲಗಡಲೆ ಬೆಳೆಯನ್ನು ಬೆಳೆಯಲಾಗಿದೆ.

ಕೋಟ್

ರಾಗಿ, ನೆಲಗಡಲೆ, ತೊಗರಿ ಬೆಳೆಗೆ ಆಗಸ್ಟ್ ತಿಂಗಳಿನಲ್ಲಿ ಮಳೆ ಹಿನ್ನಡೆಯಾದ ಕಾರಣ ಪೂರ್ಣಪ್ರಮಾಣದಲ್ಲಿ ಬೆಳೆಯಾಗಲಿಲ್ಲ. ಆದರೂ ಸಹ ರಾಗಿ ರೈತನ ಕೈ ಹಿಡಿದಿದೆ. ಅಕ್ಟೋಬರ್ ತಿಂಗಳಿನಲ್ಲಿ ಇಲಾಖೆಯಿಂದ ಸರ್ವೇ ಮಾಡಿದಲ್ಲಿ ಶೇ.೬೦ ರಷ್ಟು ಬೆಳೆಯಾಗುತ್ತದೆಂದು ವರದಿ ನೀಡಲಾಗಿತ್ತು. ಕಡೆಯಲ್ಲಿ ಬಿದ್ದ ಮಳೆಯಿಂದ ಸ್ವಲ್ಪ ಮಟ್ಟಿಗೆ ರಾಗಿ ಬೆಳೆ ಚೇತರಿಸಿಕೊಂಡಿದೆ. ಶೇ.೬೦ ರಿಂದ ೬೫ ರಷ್ಟು ಫಸಲು ರೈತನ ಕೈಗೆ ಸಿಗಲಿದೆ. ನೆಲಗಡಲೆ ಮಾತ್ರ ಶೆ.೫೦ ರಷ್ಟು ರೈತನ ಕೈಗೆ ಸಿಗಲಿದೆ. ಉಳಿದಂತೆ ತೊಗರಿ ಮತ್ತು ಅವರೇ ಶೇ.೮೦ ರಷ್ಟು ಬೆಳೆ ಬರುವ ನಿರೀಕ್ಷೆ ಇದೆ.

-ನಾಗರಾಜ್‌ರೆಡ್ಡಿ, ಉಪನಿರ್ದೇಶಕರು, ಕೃಷಿ ಇಲಾಖೆ, ಕೋಲಾರ.

ಕೋಟ್

ರಾಗಿ ಬೆಳೆ ಕಟಾವಿಗೆ ಬರುತ್ತಿದೆ. ರೈತರು ಆತುರಪಡದೇ ತೆನೆ ಮಾತ್ರ ಕಟಾವು ಮಾಡಿಕೊಂಡು ಒಣಗಿಸಿ ರಾಗಿ ಮಾಡುವ ಯಂತ್ರಕ್ಕೆ ಕೊಟ್ಟರೆ ರಾಗಿ ಗುಣಮಟ್ಟವಾಗಿರುತ್ತದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯು ಬರುತ್ತದೆ. ಕಟಾವು ಮಾಡಲು ಕೂಲಿ ಹೆಚ್ಚಾಗುತ್ತದೆಂದು ಕಟಾವು ಮಾಡುವ ಯಂತ್ರಗಳ ಮೊರೆ ಹೋದರೆ ಗುಣಮಟ್ಟದ ರಾಗಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ.

-ಚಂದ್ರಶೇಖರ್, ನೆನುಮನಹಳ್ಳಿ, ಪ್ರಗತಿಪರ ರೈತ.

ಚಿತ್ರ ೨೫ ಕೆ.ಎಲ್.ಆರ್. ೦೪ : ಮುಂಗಾರು ಮಳೆಗೆ ಬಿತ್ತಿದ ರಾಗಿ ಕಟಾವಿಗೆ ಬಂದಿರುವುದು

ಚಿತ್ರ ೨೫ ಕೆ.ಎಲ್.ಆರ್. ೦೪ಎ : ಚಂದ್ರಶೇಖರ್, ನೆನುಮನಹಳ್ಳಿ, ಪ್ರಗತಿಪರ ರೈತ.

ಚಿತ್ರ ೨೫ ಕೆ.ಎಲ್.ಆರ್. ೦೪ಬಿ : ನಾಗರಾಜ್‌ರೆಡ್ಡಿ, ಉಪನಿರ್ದೇಶಕರು, ಕೃಷಿ ಇಲಾಖೆ, ಕೋಲಾರ.

ಚಿತ್ರ ೨೫ ಕೆ.ಎಲ್.ಆರ್. ೦೪ಸಿ : ಹಿಂಗಾರು ಮಳೆಯಿಂದ ಚೇತರಿಸಿಕೊಂಡಿರುವ ರಾಗಿ ಬೆಳೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net