ಹಾಸನ ಜಿಲ್ಲೆಯಲ್ಲಿ 27 ಜೂಜುಕೋರರ ಬಂಧನ: 89,900 ರೂ. ನಗದು ವಶ

Published on

ಹಾಸನ: ನೂತನ ಎಸ್ಪಿ ಹರಿರಾಮ ಶಂಕರ್ ಅವರ ನಿರ್ದೇಶನದಂತೆ ಜಿಲ್ಲೆಯಲ್ಲಿರುವ ಜೂಜು ಅಡ್ಡೆಗಳ ಮೇಲೆ ಪೊಲೀಸರ ದಾಳಿ ಮುಂದುವರಿದಿದೆ. ಮಂಗಳವಾರ ಸಂಜೆ ಮತ್ತು ರಾತ್ರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಹಾಸನ, ಚನ್ನರಾಯಪಟ್ಟಣ ಮತ್ತು ಆಲೂರು ತಾಲೂಕುಗಳ ವಿವಿಧ ಸ್ಥಳಗಳಲ್ಲಿ ಜೂಜಾಡುತ್ತಿದ್ದ ಒಟ್ಟು 27 ಆರೋಪಿಗಳನ್ನು ಬಂಧಿಸಿ, ಅವರಿಂದ 89,900 ರೂ. ನಗದು ವಶಪಡಿಸಿಕೊಂಡಿದ್ದಾರೆ.

ಚನ್ನರಾಯಪಟ್ಟಣ ತಾಲ್ಲೂಕು ಗೌಡಗೆರೆ ಗ್ರಾಮ ಸಮೀಪದ ಅರಣ್ಯದಲ್ಲಿ ಮಂಗಳವಾರ ಸಂಜೆ ಜೂಜಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಜಿ.ಕೆ. ಸುಬ್ರಹ್ಮಣ್ಯ ಮತ್ತು ಸಿಬ್ಬಂದಿ ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿಗಳಿಮದ 41,250 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಅದೇ ದಿನ ಚನ್ನರಾಯಪಟ್ಟಣ ಟೌನ್ ಬೆಂಗಳೂರು ರಸ್ತೆ ಚನ್ನಿಗರಾಯ ಬಡಾವಣೆಯಲ್ಲಿರುವ ಪ್ರೆಂಡ್ಸ್ ರಿಕ್ರಿಯೇಷನ್ ಕ್ಲಬ್ ಮೇಲೆ ದಾಳಿ ನಡೆಸಿ, ಜೂಜಾಡುತ್ತಿದ್ದ 9 ಆರೋಪಿಗಳನ್ನು ಬಂಧಿಸಲಾಗಿದೆ. ಜೂಜಿನಲ್ಲಿ ಪಣಕ್ಕಿಟ್ಟಿದ್ದ 21,430 ರೂ.ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

ಮಂಗಳವಾರ ರಾತ್ರಿ ಆಲೂರು ತಾಲೂಕು ಪಾಳ್ಯ ಹೋಬಳಿ ಸಿಂಗೋಡನಹಳ್ಳಿ ಗ್ರಾಮದ ಬಾರೆಯ ಮೇಲೆ ಜೂಜಾಡುತ್ತಿದ್ದ 9 ಆರೋಪಿಗಳನ್ನು ಬಂಧಿಸಿ, ಅವರಿಂದ 56,200 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಆಲೂರು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಹೇಮಂತ್‌ಕುಮಾರ್ ಮತ್ತು ಸಬ್ ಇನ್‌ಸ್ಪೆಕ್ಟರ್ ಗಣೇಶ್ ಅವರು ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಜೂಜುಕೋರರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಮಂಗಳವಾರ ಸಂಜೆ ಹಾಸನ ತಾಲ್ಲೂಕು ಮೊಸಳೆಹೊಸಳ್ಳಿ ಗ್ರಾಮದ ವಾಸಿ ಕರಿಯಪ್ಪ ಎಂಬುವರ ಜಮೀನಿನ ಮಾವಿನ ಮರದ ಕೆಳಗೆ ಜೂಜಾಡುತ್ತಿದ್ದ ಐವರು ಜೂಜುಕೋರರನ್ನು ಗೊರೂರು ಠಾಣೆ ಪಿಎಸ್‌ಐ ಅಜಯ್‌ಕುಮಾರ್ ಮತ್ತು ಸಿಬ್ಬಂದಿ ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿಗಳಿಂದ 8150 ರೂ. ನಗದು, 4 ಮೊಬೈಲ್ ಫೋನ್‌ಗಳು ಮತ್ತು 4 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಟ್ಕಾ: ನಾಲ್ವರ ಬಂಧನ
ಹಾಸನ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗೆ ವಿವಿಧೆಡೆ ಮಟ್ಕಾ ಆಡಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ, 11,000 ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಹಾಸನದ ರಿಂಗ್ ರಸ್ತೆಯಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗ, ಚನ್ನಪಟ್ಟಣ ಬೈಪಾಸ್‌ನಲ್ಲಿರುವ ಮಂಜುನಾಥ ವೈನ್ಸ್ ಶಾಪ್ ಮುಂಭಾಗ, ಡೈರಿ ವೃತ್ತದಲ್ಲಿ ಮತ್ತು ಸಾಲಗಾಮೆ ರಸ್ತೆಯಲ್ಲಿರುವ ಅನ್ನಪೂರ್ಣೇಶ್ವರಿ ವೈನ್ಸ್ ಶಾಪ್ ಬಳಿ 1 ರೂ 80 ರೂಪಾಯಿ ಕೊಡುವುದಾಗಿ ಮಟ್ಕಾ ಆಡಿಸುತ್ತಿದ್ದ ಮಂಜೇಗೌಡ, ವಸೀಂ ಪಾಷ, ನಯಾಜ್ ಮತ್ತು ರಾಯಲ್ ಶರೀಫ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಹಾಸನ ಬಡಾವಣೆ ಠಾಣೆ ಪಿಎಸ್‌ಐಗಳಾದ ಎಚ್. ಮಂಜುಳ, ಗಿರಿಧರ್ ಮತ್ತು ಪುನೀತ್ ಹಾಗೂ ಎಎಸ್‌ಐ ಪರಮೇಶ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net