ಹಾಲು ಖರೀದಿ ಸ್ಥಗಿತಕ್ಕೆ ಆಕ್ರೋಶ : ಸೋಲೂರು ಶೀತಲ ಕೇಂದ್ರದ ಎದುರು ಬಸವನಪಾಳ್ಯ ಡೇರಿ ಸದಸ್ಯರ ಪ್ರತಿಭಟನೆ

13 RMN-MGD P01
Published on

ಮಾಗಡಿ :

ಹಾಲು ಪಡೆಯದಿರುವುದನ್ನು ವಿರೋಧಿಸಿ ತಾಲೂಕಿನ ತಿಪ್ಪಸಂದ್ರ ಸಿ. ಬಸವನಪಾಳ್ಯ ಮಹಿಳಾ ಹಾಲು ಉತ್ಪಾದಕ ಸಹಕಾರ ಸಂದ ಸದಸ್ಯರು ಸುರಿವ ಮಳೆಯ ನಡುವೆಯೇ ಸೋಲೂರು ಶೀತಲ ಕೇಂದ್ರದ ಎದುರು ಹಾಲನ್ನಿಟ್ಟು ಬುಧವಾರ ಪ್ರತಿಭಟನೆ ನಡೆಸಿದರು.

ಡೇರಿ ಕಾರ್ಯದರ್ಶಿ ವಿರುದ್ಧ ಧಿಕ್ಕಾರ ಕೂಗಿ, ಪ್ರತಿಭಟನೆ ತೀವ್ರಗೊಳಿಸಿದರು. ಡಿವೈಎಸ್‌ಪಿ ಓಂಪ್ರಕಾಶ್ ಎಷ್ಟು ಮನವೊಲಿಸಿದರೂ ಪ್ರತಿಭಟನಾಕಾರರು ಜಗ್ಗಲಿಲ್ಲ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಎ. ಮಂಜುನಾಥ್, ಬಮುಲ್ ಅಧ್ಯಕ್ಷ ನರಸಿಂಹಮೂರ್ತಿ ಶೀತಲ ಕೇಂದ್ರದ ಎಂಡಿ ಜವರಯ್ಯ, ಬಮುಲ್ ನಿರ್ದೇಶಕ ಕೆಇಬಿ ರಾಜಣ್ಣ ಅವರೊಂದಿಗೆ ಚರ್ಚೆ ನಡೆಸಿ, ಡೇರಿ ಕಾರ್ಯದರ್ಶಿ ತಪ್ಪು ಮಾಡಿದ್ದರೆ, ಅವ್ಯವಹಾರ ನಡೆಸಿದ್ದರೆ ಶಿಸ್ತುಕ್ರಮ ಕೈಗೊಳ್ಳಿ. ಅದನ್ನು ಬಿಟ್ಟು ಏಕಾಏಕಿ ಹಾಲು ಖರೀದಿಸದೆ ಉತ್ಪಾದಕರಿಗೆ ತೊಂದರೆ ನೀಡುವುದು ಸರಿಯಲ್ಲ ಎಂದು ಅಧಿಕಾರಿ ನಡೆ ವಿರುದ್ಧ ಕಿಡಿಕಾರಿದರು.

ತಾಲೂಕಿನ ಕೆಲ ಡೇರಿಗಳಲ್ಲಿ ಅವ್ಯವಹಾರ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿವೆ. ಅಂತಹ ಡೇರಿಗಳಲ್ಲಿ ತನಿಖೆ ನಡೆಸಿ ಸರಿದಾರಿ ತರಬೇಕೆಂಬುದು ನನ್ನ ಉದ್ದೇಶವಾಗಿದೆ. ನಮಗೆ ಉತ್ಪಾದಕರು ಮುಖ್ಯವೇ ಹೊರತು ಅಧಿಕಾರಿಗಳಲ್ಲ. ಇಂದಿನಿಂದಲೇ ಹಾಲು ಖರೀದಿಸುವಂತೆ ಸೂಚಿಸಿದ್ದೇನೆ. ಒಕ್ಕೂಟದ ಅಧಿಕಾರಿಗಳು ರೈತರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಲು ಪೊಲೀಸರಿಗೆ ತಿಳಿಸುತ್ತೇನೆ ಎಂದರು.

ಗ್ರಾಪಂ ಸದಸ್ಯ ನಿಂಗೇಗೌಡ ವಾತನಾಡಿ, ಅವ್ಯವಹಾರ ನಡೆಯುತ್ತಿರುವ ಬಗ್ಗೆ ತಿಳಿದಿದ್ದರೂ ಬಮುಲ್ ಅಧ್ಯಕ್ಷರು, ಸಭೆ ನಡೆಸಿ ಈ ವಿಷಯವನ್ನು ರೈತರಿಗೆ ತಿಳಿಸಬಹುದಾಗಿತ್ತು. ಡೇರಿ ಕಾರ್ಯದರ್ಶಿ ಜತೆ ಬಮುಲ್ ಅಧ್ಯಕ್ಷರಿಗೆ ಉತ್ತಮ ಬಾಂಧವ್ಯವಿದ್ದು, ಈ ಕಾರಣಕ್ಕೆ ಇಲ್ಲಸಲ್ಲದ ಆರೋಪ ಮಾಡಿ ರೈತರಿಗೆ ತೊಂದರೆ ನೀಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಪಂ ವಾಜಿ ಸದಸ್ಯ ನರಸಿಂಹಮೂರ್ತಿ, ಚಿಕ್ಕಕಲ್ಯಾ ಶ್ರೀಧರ್, ಕೃಷ್ಣಮೂರ್ತಿ ಕಿಟ್ಟಿ, ಕೆಡಿಪಿ ಸದಸ್ಯ ನಾಗರಾಜು, ಗ್ರಾಪಂ ಸದಸ್ಯ ಸಾಗರ್ ಗೌಡ, ಡೇರಿ ಅಧ್ಯಕ್ಷ ಎಸ್‌ಸಿಬಿಎಸ್ ಮಂಜುನಾಥ್, ಜೆಡಿಎಸ್ ಯುವ ಅಧ್ಯಕ್ಷ ವಿಜಯ್ ಕುವಾರು,ತಾ.ಪಂ. ವಾಜಿ ಅಧ್ಯಕ್ಷೆ ಅರುಂಧತಿ ಚಿಕ್ಕಣ್ಣ, ನಾರಾಯಣಮೂರ್ತಿ ಇತರರು ಇದ್ದರು.

ನರಸಿಂಹ ಮೂರ್ತಿ ಸ್ಪಷ್ಟನೆ

ಬಮುಲ್ ಅಧ್ಯಕ್ಷ ನರಸಿಂಹಮೂರ್ತಿ ವಾತನಾಡಿ, ರೈತರಿಗೆ ತೊಂದರೆ ನೀಡಬೇಕೆಂಬ ಉದ್ದೇಶದಿಂದ ಹಾಲು ಖರೀದಿಸುವುದನ್ನು ತಡೆದಿಲ್ಲ. ಡೇರಿ ಕಾರ್ಯಕಾರಿ ಮಂಡಳಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. 13 ವರ್ಷಗಳಿಂದ ಉತ್ಪಾದಕರಿಗೆ ಬೋನಸ್ ನೀಡುತ್ತಿಲ್ಲ. ಸಂಘದ ಕಾರ್ಯದರ್ಶಿ 3 ಲಕ್ಷ ರೂ. ಅವ್ಯವಹಾರ ವಾಡಿದ್ದು, ಇದುವರೆಗೂ ಲೆಕ್ಕ ನೀಡಿಲ್ಲ. ಒಕ್ಕೂಟಕ್ಕೆ ಕಳಪೆ ಹಾಲು ಪೂರೈಸುತ್ತಿದ್ದು, ಈ ಬಗ್ಗೆ ಲೆಕ್ಕ ಕೊಡುವಂತೆ, ಉತ್ಪಾದಕರಿಗೆ ಸಮರ್ಪಕವಾಗಿ ಹಣ ನೀಡುವಂತೆ ಕಾರ್ಯದರ್ಶಿಗೆ ವಿಸ್ತರಣಾಧಿಕಾರಿ ಸೂಚಿಸಿದ ವೇಳೆ ಕಾರ್ಯದರ್ಶಿ ಅವರ ಪತಿ ಹಾಲು ವಿತರಿಸದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ವಿಸ್ತರಣಾಧಿಕಾರಿ ಮೇಲೆ ಹಲ್ಲೆ ಮಾಡಿಸಿದ್ದಾರೆ. ಇದು ಉತ್ಪಾದಕರಿಗೆ ತಿಳಿಯಲಿ ಎಂದು ಹಾಲು ನಿಲ್ಲಿಸಲಾಗಿದೆಯೇ ಹೊರತು ಬೇರೆ ಉದ್ದೇಶ ಇಲ್ಲ ಎಂದು ಸ್ವಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net