

ಕೋಲಾರ: ಹಾಲು ಖರೀದಿ ದರ ಕನಿಷ್ಠ 35 ರೂ.ಗೆ ಏರಿಸುವುದೂ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರು ನಗರದ ಕೋಚಿಮುಲ್ ಕಚೇರಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಮಹೇಶ್ಗೆ ಬುಧವಾರ ಮನವಿ ಸಲ್ಲಿಸಿದರು.
ನೌಕರರ ಸಂಘದ ಅಧ್ಯಕ್ಷ ವಿಟ್ಟಪ್ಪನಹಳ್ಳಿ ವೆಂಕಟೇಶ್ ಮಾತನಾಡಿ, ಹಾಲಿನ ಖರೀದಿದರ ಪ್ರಸ್ತುತ 27 ರೂ.ಗಳಿದ್ದು, ಕನಿಷ್ಠ 35 ರೂ.ಗೆ ಏರಿಸಬೇಕು. ಸಂಘಗಳ ನಿರ್ವಹಣೆ ವೆಚ್ಚ ಲೀಟರ್ಗೆ ಒಂದು ರೂ. ನಿಗದಿ ಪಡೆಸಬೇಕು. ಒಕ್ಕೂಟದಿಂದ ಸಂಘಗಳಿಗೆ ನೀಡುವ ವಾರದ ಬಿಲ್ಲನ್ನು ನಿಗದಿತ ಅವಧಿಯೊಳಗೆ ಪಾವತಿಸಬೇಕು ಎಂದು ಒತ್ತಾಯಿಸಿದರು.
ಡೀಸೆಲ್, ವಿದ್ಯುತ್ ದರ ನಿರಂತರವಾಗಿ ಏರಿಕೆಯಾಗುತ್ತಿದ್ದು, ಬಿಎಂಸಿ ನಿರ್ವಹಣೆ ವೆಚ್ಚವನ್ನು ಸಮರ್ಥ್ಯಕ್ಕೆ ಅನುಗುಣವಾಗಿ 70, 75, ಮತ್ತು 80 ಪೈಸೆಗಳಿಗೆ ಏರಿಕೆ ಮಾಡ ಬೇಕು. ನಿವೃತ್ತಿ ಧನವನ್ನು ಬಮುಲ್ನಲ್ಲಿ ನೀಡುವಂತೆ ಸಹಾಯಕರಿಗೆ 2 ಲಕ್ಷ ರೂ., ಪರೀಕ್ಷಕರಿಗೆ 3 ಲಕ್ಷ ರೂ., ಕಾರ್ಯದರ್ಶಿಗಳಿಗೆ 5 ಲಕ್ಷ ರೂ. ನೀಡಬೇಕು ಎಂದು ಆಗ್ರಹಿಸಿದರು.
ಡೇರಿಗಳಿಗೆ ನೀಡುವ ವೇತನ, ಬಿಎಂಸಿ ಭತ್ಯೆಗಳನ್ನು ಒಕ್ಕೂಟದ ಸುತ್ತೋಲೆಯಂತೆ ನೇರ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು. ಬಿಎಂಸಿ ಕೇಂದ್ರಗಳಲ್ಲಿ ಸಿಎಲ್ಆರ್ 28+ ಬಂದಾಗ 28 ಸಿಎಲ್ಆರ್ ನೀಡುತ್ತಿದ್ದು ನಷ್ಟ ತಡೆಯಲು 28.5 ಸಿಎಲ್ಆರ್ ನೀಡಬೇಕು. ಎಲ್ಲ ಬೇಡಿಕೆ ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಈಡೇರಿಸಬೇಕು. ಇಲ್ಲವಾದರೆ ಒಕ್ಕೂಟದ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಲೀಟರ್ ಹಾಲಿಗೆ 27 ರೂ. ನಿಗದಿಪಡಿಸಿ, ಒಕ್ಕೂಟವು 40ರೂ.ಗೆ ಮಾರಾಟ ಮಾಡುತ್ತಿದೆ. 13 ರೂ.ಲಾಭ ಪಡೆಯುತ್ತಿದೆ. ಮರಣ ದತ್ತಿ ನಿಧಿಯನ್ನು ಕನಿಷ್ಠ ಸಾವಿರ ರೂ.ಗೆ ನಿಗದಿ ಪಡಿಸಬೇಕು. 13,600 ಸಿಬ್ಬಂದಿ, 85 ಸಾವಿರ ಹಾಲು ಉತ್ಪಾದಕರು ಇದ್ದು ರೈತರ ಬ್ಯಾಂಕ್ ಖಾತೆಗಳಿಗೆ ಪ್ರತಿ ತಿಂಗಳು 15ರೊಳಗೆ ಬಿಲ್ಗಳನ್ನು ಜಮೆ ಮಾಡಬೇಕು. ಡೇರಿಗಳು ಬಿಎಂಸಿಗೆ ನಿರ್ವಾಹಣೆ ಬಿಟ್ಟುಕೊಟ್ಟ ಮೇಲೆ ಲಾಭಾಂಶ ಕಡಿಮೆಯಾಗಿದೆ. ನೂರಿನ್ನೂರು ರೂ.ಗೆ ನೌಕರರು ದುಡಿಯಬೇಕಾಗಿದೆ. ಆದರೂ ಒಕ್ಕೂಟಕ್ಕೆ ಸಹಕರಿಸುತ್ತಿದ್ದೇವೆ. 15 ವರ್ಷದಿಂದ ನಿರ್ವಹಣೆ ವೆಚ್ಚ 35 ಪೈಸೆಯಿದ್ದು, ಏರಿಕೆ ಮಾಡಬೇಕಿದೆ ಎಂದರು.
ಕೋಚಿಮುಲ್ ವ್ಯವಸ್ಥಾಪಕ ಡಾ. ಶ್ರೀನಿವಾಸಗೌಡ, ಸಂಘದ ಪ್ರಧಾನ ಕಾರ್ಯದರ್ಶಿ ಬಗಲಹಳ್ಳಿ ನಾಗೇಶ್ಗೌಡ, ಗೌರವಾಧ್ಯಕ್ಷ ಚಿನ್ನಹಳ್ಳಿ ಗೋಪಾಲ್, ಮುಖಂಡರಾದ ವಕ್ಕಲೇರಿ ನಾಗರಾಜ್, ಮಾಲೂರು ಮುನಿರಾಜು, ಶ್ರೀರಂಗಪುರ ರವಿ, ಬಂಗಾರಪೇಟೆ ಮಂಜು ಇತರರಿದ್ದರು.