

ಸರಗೂರು: ತಾಲೂಕಿನ ಹಾದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾದನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಜಿಎಂಸಿಕೆಎಸ್ ವಿದ್ಯಾರ್ಥಿಗಳ ಒಕ್ಕೂಟ ಬೆಂಗಳೂರು, ನಂಜನಗೂಡು ಸಹಯೋಗದೊಂದಿಗೆ ಗುರುವಾರ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯ ಹಿಂದುಳಿದ, ಬಡ ವರ್ಗದ ಮಕ್ಕಳಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕಿ ಶಾಂತಮ್ಮ ಮಕ್ಕಳಿಗೆ ನೋಟ್ ಪುಸ್ತಕ, ಲೇಖನ ಸಾಮಗ್ರಿಗಳನ್ನು ಕೊಡಿಸುವಂತೆ ಜಿಎಂಸಿಕೆಎಸ್ ವಿದ್ಯಾರ್ಥಿಗಳ ಒಕ್ಕೂಟಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ಶಾಲೆಗೆ ಭೇಟಿ ನೀಡಿದ್ದ ಸಮಿತಿಯ ರವಿಕುಮಾರ್ ಮಕ್ಕಳಿಗೆ ನೋಟ್ ಪುಸ್ತಕ, ಲೇಖನ ಸಾಮಗ್ರಿಗಳನ್ನು ವಿತರಿಸಿದರು.
ವಿದ್ಯೆಯಿಂದ ಮಾತ್ರ ಕಳೆದುಕೊಂಡಿದ್ದನ್ನು ಮರಳಿ ಪಡೆಯಲು ಸಾಧ್ಯ. ಮಕ್ಕಳು ಉನ್ನತ ಶಿಕ್ಷಣ ಪಡೆಯುವತ್ತ ಗಮನಹರಿಸಬೇಕು. ಪಾಲಕರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಮುಖ್ಯ ಶಿಕ್ಷಕಿ ಶಾಂತಮ್ಮ ಮಾತನಾಡಿ, ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದಲ್ಲಿ ಪಾಲಕರು ಗಮನಕ್ಕೆ ತಂದರೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಒಕ್ಕೂಟದ ಸದಸ್ಯೆ ಸವಿತಾ, ಶಾಂತಿಪುರ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ರಾಜೇಂದ್ರಕುಮಾರ್, ಸಿದ್ದಯ್ಯ, ಪ್ರಸನ್ನಕುಮಾರ್, ಕೃಷ್ಣಮೂರ್ತಿ, ಗೌರೀಶ್, ಹೇಮಾವತಿ, ಸಿದ್ದು, ಎಸ್‌ಡಿಎಂಸಿ ಸದಸ್ಯರಾದ ಶಿವು, ನಂಜುಂಡಸ್ವಾಮಿ ಹಾಜರಿದ್ದರು.