ಹಾಡಿಗಳ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ

HUN-JUNE-25-2{TRIBES HEALTH CAMP PROGRAMME}
ಹುಣಸೂರು ತಾಲೂಕು ರಂಗಯ್ಯನಕೊಪ್ಪಲು ಹಾಡಿಯಲ್ಲಿ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ ಆದಿವಾಸಿಗಳು ಶಾಸಕ ಹರೀಶ್‌ಗೌಡರಿಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಿದರು. ಪಿ.ಕೆ.ರಾಮು, ಹರಿಹರ ಆನಂದಸ್ವಾಮಿ, ಪ್ರಭಾಕರ ಇದ್ದರು.
Published on

ಹುಣಸೂರು: ಆದಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ತಮಗೆ ಸಂಪೂರ್ಣ ಅರಿವು ಇದ್ದು, ಗಿರಿಜನರು ಗೌರವಯುತ ಬದುಕು ಕಟ್ಟಿಕೊಳ್ಳಲು ಬೆಂಬಲವಾಗಿ ನಿಲ್ಲುತ್ತೇನೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಭರವಸೆ ನೀಡಿದರು.


ತಾಲೂಕಿನ ತರೀಕಲ್ ರಂಗಯ್ಯನಕೊಪ್ಪಲು ಹಾಡಿಯಲ್ಲಿ ಬೆಂಗಳೂರಿನ ಸದೃಢ ಚಾರಿಟಲ್ ಟ್ರಸ್ಟ್, ಶಂಕರ ಕಣ್ಣಿನ ಆಸ್ಪತ್ರೆ, ಡೀಡ್ ಸಂಸ್ಥೆ ಮತ್ತು ಬುಡಕಟ್ಟು ಕೃಷಿಕರ ಸಂಘದಿಂದ ಶನಿವಾರ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು. ತಾಲೂಕಿನ 33 ಹಾಡಿಗಳಲ್ಲಿ ಮೂಲಸೌಕರ್ಯಗಳ ಕೊರತೆ, ಭೂಮಿಯ ಸಮಸ್ಯೆ, ವಸತಿ ಸಮಸ್ಯೆ ಇದೆ. ದಶಕಗಳ ಕಾಲದ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಆದಿವಾಸಿಗಳ ಸಮಸ್ಯೆಗಳ ಕುರಿತು ಪ್ರಸ್ತಾಪಿಸಲಿದ್ದೇನೆ ಎಂದರು.


ಡೀಡ್ ಸಂಸ್ಥೆ ಮುಖ್ಯಸ್ಥ ಡಾ.ಎಸ್.ಶ್ರೀಕಾಂತ ಮಾತನಾಡಿ, ಆದಿವಾಸಿಗಳು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಪರಿಹರಿಸುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ನ್ಯಾಯಾಲಯದ ಆದೇಶಗಳನ್ನು ಪಾಲನೆ ಮಾಡದ ಸರ್ಕಾರಗಳನ್ನು ಕಟಕಟೆಯಲ್ಲಿ ನಿಲ್ಲಿಸಬೇಕಾದ ಅನಿವಾರ್ಯತೆ ಇದೆ. ಆದಿವಾಸಿಗಳ ಸಮಸ್ಯೆಯನ್ನು ಶಾಸಕರು ಗಂಭೀರವಾಗಿ ಪರಿಗಣಿಸಿ ಪರಿಹಾರದತ್ತ ಕ್ರಮಕೈಗೊಳ್ಳಬೇಕು. ಆದಿವಾಸಿಗಳಿಗೆ ರಾಜಕೀಯ ಅಧಿಕಾರ ಸಿಗುವಂತೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೋರಿದರು.


ಶಿಬಿರದಲ್ಲಿ ಒಟ್ಟು 640 ಆದಿವಾಸಿಗಳು ತಪಾಸಣೆಗೊಳಗಾದರು. ಈ ಪೈಕಿ 200 ಜನರಿಗೆ ಕನ್ನಡಕಗಳನ್ನು ವಿತರಿಸಲಾಯಿತು. 140 ಜನರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದ್ದು, ಬೆಂಗಳೂರಿಗೆ ಕರೆದೊಯ್ಯಲು ತೀರ್ಮಾನಿಸಲಾಯಿತು.


ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಬಿ.ಸುರೇಂದ್ರ, ಸತೀಶ್ ಪಾಪಣ್ಣ, ಗಣೇಶ್‌ಗೌಡ, ಪ್ರೇಮೇಗೌಡ, ಹಿರಿಯ ದಲಿತ ಮುಖಂಡ ಹರಿಹರ ಆನಂದಸ್ವಾಮಿ, ರತ್ನಪುರಿ ಪ್ರಭಾಕರ್, ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ.ರಾಮು ಹಾಜರಿದ್ದರು.


ಶಾಸಕ ಹರೀಶ್‌ಗೌಡ ಅವರೂ ಕಣ್ಣಿನ ತಪಾಸಣೆ ಮಾಡಿಸಿಕೊಂಡರು. ಆದಿವಾಸಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಾಸಕರಿಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net