

ಬಾಗೇಪಲ್ಲಿ : ಹಸು ಇರುವ ಮನೆ ಹಸನಾಗಿರುತ್ತದೆ, ಎರಡು ಹಸು ಕಟ್ಟಿದರೆ ಜೀವನ ಸುಗಮವಾಗಿ ಸುಖಮಯವಾಗಿರುತ್ತದೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಹೇಳಿದರು.
ಗೂಳೂರಿನಲ್ಲಿ ಬುಧವಾರ ಡೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿ, ರೈತರನ್ನು ಕಾಪಾಡುವ ಹಸುವಿಗೆ ವಿಮೆ ಮಾಡಿಸಬೇಕು. ಇದರಿಂದ ಕಷ್ಟ ಕಾಲದಲ್ಲಿ ಸಹಾಯವಾಗುತ್ತದೆ. ಸರ್ಕಾರದಿಂದ ಬರುವ ಎಲ್ಲ ಸವಲತ್ತುಗಳನ್ನು ಸಾರ್ವಜನಿಕರು ಪಡೆಯಬೇಕು ಎಂದರು.
ಕೋಚಿಮುಲ್ ನಿರ್ದೇಶಕ ಮಂಜುನಾಥರೆಡ್ಡಿ ಮಾತನಾಡಿ, ಡೇರಿಗೆ ಹಾಲು ಹಾಕಿರುವ ಪ್ರತಿಯೊಬ್ಬ ರೈತನ ಶ್ರಮದಿಂದ ಡೇರಿಯ ಕಟ್ಟಡ ನಿರ್ಮಾಣವಾಗಿದೆ. ಹಾಲು ಒಕ್ಕೂಟ ಕಟ್ಟಡ ಕಾಮಗಾರಿಗೆ ಕೇವಲ 2 ಲಕ್ಷ ರೂ. ಅನುದಾನ ನೀಡಿದೆ. ಉಳಿದ ಹಣ ರೈತರದ್ದು. ಹೀಗಾಗಿ ಡೇರಿ ಹಾಗೂ ಕಟ್ಟಡ ನಿಮ್ಮದು ಎಂದರು.
ತಾಪಂ ಮಾಜಿ ಅಧ್ಯಕ್ಷ ಎಸ್.ಎಸ್. ರಮೇಶ್‌ಬಾಬು ಹಾಗೂ ಡೇರಿ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ ಮಾತನಾಡಿದರು. ಫಲಾನುಭವಿಗಳಿಗೆ ವಿಮೆ ಚೆಕ್ ಹಾಗೂ ಹಾಲಿನ ಕ್ಯಾರಿಯರ್ ವಿತರಿಸಲಾಯಿತು.ತಾಪಂ ಅಧ್ಯಕ್ಷ ನರೇಂದ್ರ, ಜಿಪಂ ಸದಸ್ಯ ಬೂರಗಮಡುಗು ನರಸಿಂಹಪ್ಪ, ಕೋಚಿಮುಲ್ ಸಹಾಯಕ ನಿರ್ದೇಶಕ ಪುಣ್ಯಕೋಟಿ ಮತ್ತಿತರರಿದ್ದರು.