ಹಳ್ಳಿ ಮೈಸೂರಿನಲ್ಲಿ ಅಂಗವಿಕಲರಿಗೆ ದಿನಸಿ ಕಿಟ್ ವಿತರಿಸಿದ ಮಾಜಿ ಸಚಿವ ಎಚ್.ವಿಶ್ವನಾಥ್

IMG-20200512-WA0025.jpg
Published on

ಅರಕಲಗೂಡು: ಅರಕಲಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳ್ಳಿಮೈಸೂರಿನಲ್ಲಿ ಮಂಗಳವಾರ ಸಾವಿರಾರು ಅಂಗವಿಕಲರಿಗೆ ಉಚಿತವಾಗಿ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು.

ಬಿಜೆಪಿ ಮುಖಂಡ‌ ಎಚ್. ವಿಶ್ವನಾಥ್ ಕಿಟ್ ವಿತರಿಸಿ ಮಾತನಾಡಿ, ಜಾಗತಿಕ ಸಮಸ್ಯೆಯಾಗಿ ಕಾಡುತ್ತಿರುವ ಕರೊನಾ ಸಂಕಷ್ಟದಿಂದ ಅದೆಷ್ಟೋ ಜನರ ಬದುಕಿಗೆ ಕಂಟಕವಾಗಿದೆ. ಇದನ್ನು ಮನಗಂಡು ಪುಟ್ಟಸ್ವಾಮಿ ಅವರ ಮುಖಂಡತ್ವದಲ್ಲಿ ಬೆಂಗಳೂರುನ ಮೂಲದ ಉದ್ಯಮಿ ಚಿಕ್ಕರೇವಣ್ಣ ಅವರು ಅಂಗವಿಕಲರನ್ನು ಗುರುತಿಸಿ ಆಹಾರ ಕಿಟ್ ವಿತರಿಸಿ ನೊಂದವರ ಸಮಸ್ಯೆಗೆ ಸ್ಪಂದಿಸುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಮುಖ್ಯವಾಗಿ ನವಜಾತ ಶಿಶುಗಳ ಮರಣ ತಪ್ಪಿಸಲು ಜೀವರಕ್ಷಕ ಔಷಧಿಗಳನ್ನು ವಿತರಿಸುವುದು ಅಗತ್ಯವಾಗಿದೆ ಎಂದರು.

ಸೋಂಕು ತಡೆಯಲು ಸರ್ಕಾರ ಲಾಕ್ ಡೌನ್ ವಿಧಿಸಿದೆ. ಇದನ್ನು ವಲಯಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಜ‌ನರು ಸಹ ಸ್ವಯಂ ಪ್ರೇರಿತರಾಗಿ ಜಾಗೃತರಾಗಿ ಸೋಂಕು ತಡೆದು ಜೀವ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ದಾನಿ ಚಿಕ್ಕರೇವಣ್ಣ ಮಾತನಾಡಿ, ಪೌರ ಕಾರ್ಮಿಕರು, ಅಂಗವಿಕಲರು‌ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಈಗಾಗಲೇ ೩೫ ಸಾವಿರ ಬಡವರಿಗೆ ದಿನಸಿ ಕಿಟ್ ಹಾಗೂ ಸಾಕಷ್ಟು ಕಡೆ ಆಹಾರ ವಿತರಿಸಿ ಜನರ‌ ಹಸಿವು ನೀಗಿಸಲಾಗುತ್ತಿದೆ ಎಂದು ತಿಳಿಸಿದರು.

ನಿವೃತ್ತ ಐಎಎಸ್‌ ಅಧಿಕಾರಿ ಎಸ್. ಪುಟ್ಟಸ್ವಾಮಿ ಮಾತನಾಡಿ, ಅಂಗವಿಕಲರು ಹೆಚ್ಚು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಹೋಬಳಿಯ ಎಲ್ಲ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ವೆ ಕಾರ್ಯ ನಡೆಸಿ ಅಂಗವಿಕಲರನ್ನು ಗುರುತಿಸಿ ಆಹಾರ ಸಾಮಾಗ್ರಿಗಳನ್ನು‌ ವಿತರಿಸಿ ಸಹಾಯ ಮಾಡಲಾಗುತ್ತಿದೆ ಎಂದರು.

ಹಿರೀಸಾವೆ ಶ್ರೀಸಾಯಿ ಸಿದ್ದಾಶ್ರಮದ ಶ್ರೀಗುರುಮೂರ್ತಿ ಗುರೂಜಿ, ನಿವೃತ್ತ ಅಧಿಕಾರಿ ವೆಂಕಟೇಶಗೌಡ ಹಾಗೂ ಹೋಬಳಿಯ ಮುಖಂಡರು ಹಾಜರಿದ್ದು ದಿನಸಿ ಕಿಟ್ ವಿತರಣಾ ಕಾರ್ಯದಲ್ಲಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net