ಹಳ್ಳದ ಜಾಗ ಪೂರ್ಣ ತೆರವುಗೊಳಿಸಿ

9kdr1 raitha
ನ್ಯಾಯಾಲಯದ ಆದೇಶದಂತೆ ಬಾಣೂರು ಗ್ರಾಮದ ರೈತರಿಗೆ ಒತ್ತುವರಿ ಜಾಗ ತೆರವುಗೊಳಿಸಿಕೊಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಯಾಜ್, ಬಾಸೂರು ರವಿ, ನಿಡಘಟ್ಟ ದಯಾನಂದ್, ಬಸವರಾಜಪ್ಪ, ಎಂ.ಬಿ.ಚಂದ್ರಶೇಖರ್, ಸೋಮಶೇಖರಪ್ಪ, ಅರುಣಾಕ್ಷಿ ಮತ್ತಿತರಿದ್ದರು.
Published on

ಕಡೂರು: ಉಚ್ಚ ನ್ಯಾಯಾಲಯದ ಆದೇಶದಂತೆ ಸರ್ಕಾರಿ ಹಳ್ಳದ ಜಾಗವನ್ನು ಪೂರ್ಣ ತೆರವುಗೊಳಿಸಿ ಈ ಭಾಗದ ರೈತರ ಜಮೀನುಗಳನ್ನು ರಕ್ಷಿಸಬೇಕಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ವಕ್ತಾರ ಯಾಜ್ ಆಗ್ರಹಿಸಿದರು.

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಸೋಮವಾರ ತಾಲೂಕಿನ ಬಾಣೂರು ಗ್ರಾಮದ ಸರ್ವೇ ನಂ.135/7ರ ಜಮೀನಿನಲ್ಲಿ ಒತ್ತುವರಿ ತೆರವು ಪ್ರಕರಣವನ್ನು ನ್ಯಾಯಸಮ್ಮತವಾಗಿ ನಡೆಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಈಗಾಗಲೇ ತಾಲೂಕಿನ ಶಿವಪುರ ಗ್ರಾಮದ ವ್ಯಕ್ತಿಯೊಬ್ಬರು 17 ಅಡಿ ಅಗಲದ ಹಳ್ಳವನ್ನು ಮುಚ್ಚಿ ಕೇವಲ ಮಾನವ ನಿರ್ಮಿತ ಚರಂಡಿಯನ್ನು ನಿರ್ಮಿಸಿದ ಪರಿಣಾಮ ಬಾಣೂರು ಭಾಗದ ರೈತ ಸೋಮಶೇಖರಪ್ಪ ಹಾಗೂ ಇತರ ರೈತರ ಜಮೀನಿಗಳ ಮೇಲೆ ಹಳ್ಳದ ನೀರು ನುಗ್ಗುತ್ತಿದೆ. ಇದರಿಂದ ರೈತರ ಜಮೀನುಗಳು ಲವತ್ತತೆಯನ್ನು ಕಳೆದುಕೊಳ್ಳುತ್ತಿದ್ದು ಜಮೀನು ಉಳುಮೆ ಮಾಡಲು ಸಾಕಷ್ಟು ಸಮಸ್ಯೆ ಉಂಟಾಗಿದ್ದರ ಬಗ್ಗೆ ಹೈಕೋರ್ಟ್‌ನಲ್ಲಿ ದಾವೆ ಹೂಡಿದ ಹಿನ್ನಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಒತ್ತುವರಿಯನ್ನು ತೆರವುಗೊಳಿಸುವಂತೆೆ ತಹಸೀಲ್ದಾರ್ ಅವರಿಗೆ ಸೂಚಿಸಿದ್ದರೂ ಕೂಡ ಇದುವರೆಗೂ ಸಮರ್ಪಕವಾಗಿ ತೆರವುಗೊಳಿಸುವ ಕಾರ್ಯಾಚರಣೆ ನಡೆಸದೆ ಇರುವುದು ರೈತರಲ್ಲಿ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ದೂರಿದರು.

ಉಚ್ಚ ನ್ಯಾಯಾಲಯದ ಆದೇಶಕ್ಕೆ ಬೆಲೆ ನೀಡದೆ ತಹಸೀಲ್ದಾರ್ ಸೇರಿದಂತೆ ಸಖರಾಯಪಟ್ಟಣದ ರಾಜಸ್ವ ನಿರೀಕ್ಷಕ ಅಗೌರವವಾಗಿ ನಡೆದುಕೊಂಡಿದ್ದಾರೆ. ಜೂ.7ರಂದು ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ಸರ್ಕಾರಿ ರಜಾ ದಿನದಂದು ಸಖರಾಯಪಟ್ಟಣದ ರಾಜಸ್ವ ನಿರೀಕ್ಷಕ ಒತ್ತುವರಿ ಜಾಗದ ಸ್ಥಳದಲ್ಲಿದ್ದು ಕೇವಲ 6 ಆಗಲ ಚರಂಡಿಯನ್ನು ನಿರ್ಮಿಸಿ ಆ ಮಣ್ಣನ್ನು ಒತ್ತುವರಿದಾರ ಜಮೀನಿಗೆ ಒತ್ತು ಹಾಕಿರುತ್ತಾರೆ. ಜಾಗದ ಒತ್ತುವರಿಯನ್ನು ನೆಪಮಾತ್ರಕ್ಕೆ ಭಾಗಶಃ ತೆರವು ಮಾಡಿದ್ದು ಪೂರ್ಣ ಪ್ರಮಾಣದಲ್ಲಿ ಒತ್ತುವರಿ ತೆರವುಗೊಳಿಸಿಲ್ಲ. ನ್ಯಾಯಾಲಯದ ಆದೇಶದಂತೆ 17 ಅಡಿ ಅಗಲದ ಹಳ್ಳದ ಜಾಗವನ್ನು ತೆರವುಗೊಳಿಸದಿದ್ದಲ್ಲಿ ರೈತ ಸಂಘದಿಂದ ಆಹೋರಾತ್ರಿ ಧರಣಿ ನಡೆಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಾಸೂರು ರವಿ, ಜಿಲ್ಲಾ ಗೌರವಾಧ್ಯಕ್ಷ ಬಸವರಾಜಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ.ಚಂದ್ರಶೇಖರ್, ಜಿಲ್ಲಾ ಕಾರ್ಯಾಧ್ಯಕ್ಷ ನಿಡಘಟ್ಟ ದಯಾನಂದ್, ಗ್ರಾಮಸ್ಥರಾದ ಸೋಮಶೇಖರಪ್ಪ, ಅರುಣಾಕ್ಷಿ, ಪರ್ವತೆಗೌಡ, ಲೋಕೇಶ್, ಚಂದ್ರಶೇಖರ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net