

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯಲ್ಲಿ ಏಪ್ರಿಲ್ 16ರಂದು ರಾತ್ರಿ ನಡೆದಿದ್ದ ಕೋಮುಗಲಭೆಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆಯನ್ನು ಬೆಂಗಳೂರು ವಿಶೇಷ ಕೋರ್ಟ್ಗೆ ವರ್ಗಾವಣೆ ಮಾಡಿ ಇಲ್ಲಿನ ನಾಲ್ಕನೇ ಹೆಚ್ಚುವರಿ ದಿವಾಣಿ ಮತ್ತು ಜೆಎಂಎಫ್ ಸಿ ನ್ಯಾಯಾಲಯ ಸೋಮವಾರ ಆದೇಶಿಸಿದೆ.
ವಿವಾದಾತ್ಮಕ ವಾಟ್ಸ್ ಆ್ಯಪ್ ಸ್ಟೇಟಸ್ಗೆ ಸಂಬಂಧಿಸಿದಂತೆ ಸಾವಿರಾರು ಜನ ದಂಗೆ ಎದ್ದಿದ್ದರು. ಆರೋಪಿಯನ್ನು ತಮಗೆ ಒಪ್ಪಿಸುವಂತೆ ಹಳೇ ಹುಬ್ಬಳ್ಳಿ ಠಾಣೆಗೆ ಮುತ್ತಿಗೆ ಹಾಕಿದ್ದರು. ಪೊಲೀಸರ ಮೇಲೆ ಕಲ್ಲೆಸೆದು ಗಾಯಪಡಿಸಿದ್ದರು. ಈ ಕುರಿತು ಒಟ್ಟು 13 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದ ಪೊಲೀಸರು, ಒಟ್ಟು 155 ಆರೋಪಿಗಳನ್ನು ಬಂಧಿಸಿದ್ದರು. ಇವರನ್ನು ಬೆಳಗಾವಿ, ಕಲಬುರಗಿ, ಮೈಸೂರು ಸೇರಿದಂತೆ ವಿವಿಧ ಜೈಲುಗಳಲ್ಲಿ ಇರಿಸಿದ್ದರು.
ಈ 13 ಪ್ರಕರಣಗಳ ಪೈಕಿ ಒಂದು ಪ್ರಕರಣವನ್ನು (ಸಿಆರ್ ನಂಬರ್ 63/2022) ಯುಎಪಿಎ (ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ಕಾಯ್ದೆಯಡಿ ದಾಖಲಿಸಲಾಗಿತ್ತು. ಈ ಪ್ರಕರಣದಡಿ ದಾಖಲಾಗುವ ಎಲ್ಲ ಪ್ರಕರಣಗಳನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯವೇ ವಿಚಾರಣೆ ನಡೆಸುತ್ತದೆ. ಹಾಗಾಗಿ, ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿ ಇಲ್ಲಿನ ನಾಲ್ಕನೇ ಹೆಚ್ಚುವರಿ ದಿವಾಣಿ ಮತ್ತು ಜೆಎಂಎಫ್ ಸಿ ನ್ಯಾಯಾಲಯ ಈ ಆದೇಶಿಸಿದೆ.