

ಕಳಸ: ಸ್ವಾತಂತ್ರೃ ಪೂರ್ವದಲ್ಲಿ ಕಳಸ-ಬಾಳೆಹೊನ್ನೂರು ರಸ್ತೆ ಮಧ್ಯ ಭದ್ರಾ ನದಿಗೆ ಕಟ್ಟಿದ ಹಳುವಳ್ಳಿ ಸೇತುವೆ ಶಿಥಿಲಾವಸ್ಥೆ ತಲುಪಿದೆ. ಸೇತುವೆ ಗುಣಮಟ್ಟ ಪರಿಶೀಲನೆ ನಡೆಸಿ ದುರಸ್ತಿಗೆ ವರದಿ ಸಲ್ಲಿಸಿದ್ದರೂ ಅನುದಾನ ಬಿಡುಗಡೆ ಆಗಿಲ್ಲ. ಹೀಗಾಗಿ ಪಿಡಬ್ಲುೃಡಿ ಅಧಿಕಾರಿಗಳು ಕೈಚೆಲ್ಲಿ ಕುಳಿತಿದ್ದಾರೆ. ಈ ವರ್ಷ ಮಳೆಗಾಲದಲ್ಲಿ ಸೇತುವೆ ಮೇಲೆ ಉಸಿರು ಬಿಗಿಹಿಡಿದು ಸಂಚರಿಸುವಂತಿದೆ.
1941ರಲ್ಲಿ ನಿರ್ಮಿಸಿದ ಸೇತುವೆಯನ್ನು ಮೈಸೂರು ರಾಜ ಜಯಚಾಮರಾಜೇಂದ್ರ ಒಡೆಯರ್ ಉದ್ಘಾಟಿಸಿದ್ದರು. ಆದರೆ ಸೇತುವೆ ನಾಲ್ಕು ವರ್ಷಗಳಿಂದ ಶಿಥಿಲಗೊಂಡಿದೆ. ಸೇತುವೆಯ ಮೂರು ಆಧಾರ ಸ್ತಂಭಗಳು ಸಂಪೂರ್ಣ ಶಿಥಿಲಗೊಂಡು ಕಬ್ಬಿಣದ ರಾಡುಗಳು ಮೇಲೆದ್ದು ಬಂದಿವೆ. ಮಳೆಗಾಲದಲ್ಲಿ ನೀರಲ್ಲಿ ತೇಲಿ ಬರುವ ಮರದ ದೊಡ್ಡ ದಿಮ್ಮಿಗಳು ಹೊಡೆದು ಬಹಳಷ್ಟು ಹಾನಿಯಾಗಿದೆ. ಇದರಿಂದ ಸೇತುವೆ ಕುಸಿಯುವ ಸಾಧ್ಯತೆ ಹೆಚ್ಚಾಗಿದೆ.
ಕಳಸ-ಬಾಳೆಹೊನ್ನೂರು ಸಂಪರ್ಕಿಸುವ ಮುಖ್ಯರಸ್ತೆಯಾಗಿದೆ. ಅಲ್ಲದೆ ಮಂಗಳೂರು, ಕಾರ್ಕಳ, ಶೃಂಗೇರಿ, ಹೊರನಾಡು, ಶಿವಮೊಗ್ಗ ಸೇರಿದಂತೆ ಹಲವಾರು ಊರುಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆ ಇದಾಗಿದೆ. ಪ್ರತಿನಿತ್ಯ ನೂರಾರು ಸರಕು ವಾಹನ, ಬಸ್ ಇತರ ವಾಹನಗಳು ಈ ಸೇತುವೆ ಮುಖಾಂತರ ಸಂಚರಿಸುತ್ತವೆ. ಈ ಸೇತುವೆ ಸಂಪರ್ಕ ಕಡಿತಗೊಂಡರೆ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಲಿದೆ.
ಎರಡು ವರ್ಷಗಳ ಹಿಂದೆ ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಾಹಣಾ ಕೇಂದ್ರದಿಂದ ಇಂಜಿನಿಯರ್‌ಗಳ ತಂಡ ಸೇತುವೆಯ ಗುಣಮಟ್ಟ ಪರೀಕ್ಷಿಸಿತ್ತು. ಸೇತುವೆಯ ಎರಡು ಆಧಾರ ಸ್ತಂಭಗಳು ಅಪಾಯದಲ್ಲಿದೆ ಎನ್ನುವ ವರದಿ ಕೂಡ ನೀಡಲಾಗಿತ್ತು. ಆದರೆ ನಂತರದಲ್ಲಿ ಇಲಾಖೆ ಮಾತ್ರ ಇದನ್ನು ಮರೆತಂತಿದೆ.