

ಶಿವಮೊಗ್ಗ: ಕಳೆದೆರಡು ವರ್ಷ ಸರಳವಾಗಿ ನಡೆದಿದ್ದ ಗೌರಿ-ಗಣೇಶ ಹಬ್ಬವನ್ನು ಆ.30 ಮತ್ತು 31ರಂದು ಅದ್ಧೂರಿಯಾಗಿ ಆಚರಿಸಲು ಮಲೆನಾಡು ಸಜ್ಜಾಗಿದೆ. ವಿವಿಧ ವಿನ್ಯಾಸದ ಗಣೇಶ ಮೂರ್ತಿಗಳು ಈಗಾಗಲೇ ಮಾರುಕಟ್ಟೆಗೆ ಪ್ರವೇಶಿಸಿದ್ದು ಮೂರ್ತಿಗಳ ಜತೆಗೆ ಹಬ್ಬ ಆಚರಣೆಗೆ ಬೇಕಾದ ಅಗತ್ಯ ವಸ್ತುಗಳ ಖರೀದಿ ಭರಾಟೆಯೂ ಜೋರಾಗಿದೆ.
ಕರೊನಾ ಕಾರಣಕ್ಕೆ ಎರಡು ವರ್ಷಗಳಿಂದ ಗೌರಿ-ಗಣೇಶ ಹಬ್ಬ ಕಳೆಗುಂದಿತ್ತು. ಕರೊನಾ ಸೋಂಕು ತಗ್ಗಿರುವ ಕಾರಣ ಶಿವಮೊಗ್ಗ ನಗರ ಸೇರಿದಂತೆ ಎಲ್ಲೆಡೆ ಗೌರಿ-ಗಣೇಶ ಹಬ್ಬಕ್ಕೆ ಸಂಭ್ರಮದ ವಾತಾವರಣ ಸೃಷ್ಟಿಯಾಗಿದ್ದು ಕಳೆದೊಂದು ವಾರದಿಂದಲೇ ಎಲ್ಲೆಡೆ ಹಬ್ಬದ ಸಡಗರ ಕಳೆಕಟ್ಟಿದೆ.
ಪ್ರಮುಖ ವಾಣಿಜ್ಯ ಕೇಂದ್ರಗಳಾದ ಬಿ.ಎಚ್.ರಸ್ತೆ, ಗಾಂಧಿಬಜಾರ್, ನೆಹರೂ ರಸ್ತೆ, ದುರ್ಗಿಗುಡಿ, ಸವಳಂಗ ರಸ್ತೆ ಮುಂತಾದ ಕಡೆ ವ್ಯಾಪಾರ ವಹಿವಾಟು ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಜನಸಾಗರ ಕಂಡುಬಂದಿದೆ. ಹಬ್ಬಕ್ಕೆ ಬೇಕಾದ ದಿನಸಿ ಸಾಮಗ್ರಿ, ಪೂಜೆಗೆ ಬೇಕಾದ ಅಗತ್ಯ ಸಾಮಗ್ರಿ, ಹೊಸ ಬಟ್ಟೆ ಸೇರಿದಂತೆ ವಿವಿಧ ವಸ್ತುಗಳ ಖರೀದಿಯಲ್ಲಿ ಜನ ತೊಡಗಿರುವುದು ಕಂಡುಬಂದಿತು. ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ಭರ್ಜರಿಯಾಗಿ ಸಾಗಿದೆ. ಸ್ಥಳೀಯ ಸಂಸ್ಥೆಗಳು, ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ವಿವಿಧ ಸಂಘಸಂಸ್ಥೆಗಳು ಮಣ್ಣಿನ ಮೂರ್ತಿಗಳ ಉಚಿತವಾಗಿ ವಿತರಣೆ ಮಾಡಿವೆ. ಸಾರ್ವಜನಿಕರು ನಿರ್ದಿಷ್ಟ ಸ್ಥಳದಲ್ಲಿ, ಇಲ್ಲವೇ ಸಂಚಾರಿ ವಾಹನಗಳ ತೊಟ್ಟಿಗಳಲ್ಲಿ ಮೂರ್ತಿಗಳನ್ನು ವಿಸರ್ಜಿಸುವಂತೆ ಮನವಿ ಕೂಡ ಮಾಡಿವೆ.