

ನಂಜನಗೂಡು: ಶ್ರೀ ವೀರಾಂಜನೇಯ ಧರ್ಮ ಜಾಗೃತಿ ಬಳಗದ ವತಿಯಿಂದ ಶನಿವಾರ ಹನುಮ ಜಯಂತ್ಯುತ್ಸವ ವಿಜೃಂಭಣೆಯಿಂದ ಜರುಗಿತು. ಅಲಂಕೃತ ಆಂಜನೇಯ ಸ್ವಾಮಿ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು. ಸಾಗರೋಪಾದಿಯಲ್ಲಿ ಆಗಮಿಸಿದ ಹನುಮ ಭಕ್ತರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ನಗರದ ಶ್ರೀಕಂಠೇಶ್ವರಸ್ವಾಮಿ ದೇಗುಲದ ಮುಂಭಾಗದಲ್ಲಿ ಬೃಹದಾಕಾರದ ಆಂಜನೇಯ ಸ್ವಾಮಿಯ ವಿಗ್ರಹಕ್ಕೆ ಮಲ್ಲನಮೂಲೆ ಮಠಾಧ್ಯಕ್ಷ ಶ್ರೀ ಚನ್ನಬಸವಸ್ವಾಮೀಜಿ, ಹಿರೇಹಡಗಲಿ ಶ್ರೀಹಾಲ ಸ್ವಾಮೀಜಿ, ಮಹಾಸಂಸ್ಥಾನ ಮಠದ ಶ್ರೀ ಅಭಿನವ ಹಾಲ ಸ್ವಾಮೀಜಿ, ಶಾಸಕ ದರ್ಶನ್ ಧ್ರುವನಾರಾಯಣ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಮೆರವಣಿಗೆಗೆ ವಿಧ್ಯುಕ್ತ ಚಾಲನೆ ನೀಡಿದರು.
ಓಂಕಾರ ಆಕೃತಿಯೊಂದಿಗಿನ 8 ಅಡಿ ಎತ್ತರದ ಹನುಮ ಮೂರ್ತಿ, ಮೂವ್‌ಮೆಂಟ್ ಹನುಮಾನ್, ಕಂಚಿನ ಹನುಮ ವಿಗ್ರಹಗಳು ಮಂಗಳವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯಲ್ಲಿ ಸಾಗಿದವು. ಇತ್ತ ಕೇರಳದಿಂದ ಆಗಮಿಸಿದ್ದ ಸಿಂಗಾರಿ ಮೇಳ ತಂಡದ ದೈವನಾಚಿಂ ಕಲಾವಿದರ ಚಂಡೆವಾದ್ಯ ಮೆರವಣಿಗೆಗೆ ಮೆರುಗು ತಂದುಕೊಟ್ಟಿತು. 10 ಅಡಿ ಎತ್ತರದ ಹನುಮ, ಶಿವ, ಪಾರ್ವತಿ, ದುರ್ಗೆ ವೇಷಧಾರಿಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದರು.
ವೀರಗಾಸೆ, ಪೂಜಾ ಕುಣಿತ, ಕಂಸಾಳೆ, ನಂದಿಧ್ವಜ, ಗಾರುಡಿ ಗೊಂಬೆ ಕಲಾತಂಡಗಳ ಪ್ರದರ್ಶನ ಮೆರವಣಿಗೆಯ ಅಂದ ಹೆಚ್ಚಿಸಿತು. ನಗಾರಿ ಸದ್ದಿಗೆ ಯುವಕರು ಕುಣಿದು ಸಂಭ್ರಮಪಟ್ಟರು. ಯುವತಿಯರು ನಾವು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಹೆಜ್ಜೆ ಹಾಕಿದರು. ಅಲ್ಲಲ್ಲಿ ಬೃಹದಾಕಾರದ ಹನುಮ ಹಾಗೂ ಶ್ರೀರಾಮನ ಪರದೆಗಳನ್ನು ರಸ್ತೆಗಳಲ್ಲಿ ಪ್ರದರ್ಶಿಸುತ್ತಿದ್ದರೆ ಹನುಮ ಭಕ್ತರಿಂದ ಹರ್ಷೋದ್ಗಾರ ಮೊಳಗುತ್ತಿತ್ತು.
ಯುವಕರು ಸಾಮೂಹಿಕವಾಗಿ ಕೇಸರಿ ಟೀ ಶರ್ಟ್ ಧರಿಸಿ ಮೆರವಣಿಗೆಯುದ್ದಕ್ಕೂ ಕೇಸರಿ ಬಾವುಟ, ಓಂಕಾರ ಬಾವುಟಗಳನ್ನು ಪ್ರದರ್ಶಿಸುತ್ತ ಸಾಗಿದರು. ಯಾತ್ರೆ ಸಾಗುವ ಮಾರ್ಗವೆಲ್ಲ ಕೇಸರಿ ಬಂಟಿಂಗ್ಸ್‌ಗಳಿಂದ ರಾರಾಜಿಸುತ್ತಿದ್ದವು. ಪಟಾಕಿ ಸಿಡಿಮದ್ದುಗಳ ಸದ್ದು ಮೊಳಗಿತು. ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ರಸ್ತೆಯ ಇಕ್ಕೆಲಗಳಲ್ಲಿ ಜನರು ಕಿಕ್ಕಿರಿದು ನಿಂತಿದ್ದರು. ಅಲ್ಲಲ್ಲಿ ಸಂಘ-ಸಂಸ್ಥೆಗಳು ಭಕ್ತರಿಗೆ ಮಜ್ಜಿಗೆ, ಪಾನಕ, ನೀರು, ಪ್ರಸಾದ ವಿತರಣೆ ಮಾಡುವ ಮೂಲಕ ದಾಹ, ಹಸಿವು ನೀಗಿಸಿದರು. ಮೆರವಣಿಗೆಯು ರಾಷ್ಟ್ರಪತಿ ರಸ್ತೆ, ಎಂಜಿಎಸ್ ರಸ್ತೆ, ಬಜಾರ್ ರಸ್ತೆ, ಅಂಗಡಿ ಬೀದಿಯಲ್ಲಿ ಸಂಚರಿಸಿತು.
ಎಸ್ಪಿ ಸೀಮಾ ಲಾಟ್ಕರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. 1500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಮಾರುತಿ ಗುಡ್ಡದಲ್ಲಿ ಹೋಮ: ಹನುಮ ಜಯಂತಿ ಅಂಗವಾಗಿ ಮಾರುತಿ ಗುಡ್ಡದಲ್ಲಿರುವ ಪರ್ವತಾಂಜನೇಯಸ್ವಾಮಿ ದೇಗುಲದಲ್ಲಿ ಹೋಮ ನೆರವೇರಿತು. ಬೆಟ್ಟ ಹತ್ತುವ ಮಾರ್ಗದುದ್ದಕ್ಕೂ ಕೇಸರಿ ಬಣ್ಣದ ಬಂಟಿಂಗ್ಸ್‌ಗಳನ್ನು ಕಟ್ಟಲಾಗಿತ್ತು. ಭಕ್ತರು ಪೂರ್ಣ ಕಳಸ ಹೊತ್ತು ನಗಾರಿ ಸದ್ದಿನೊಂದಿಗೆ ಬೆಟ್ಟಕ್ಕೆ ತೆರಳಿದರು. ಪುರೋಹಿತ ಕೃಷ್ಣ ಜೋಯಿಸ್ ನೇತೃತ್ವದಲ್ಲಿ ಸಕಲ ಧಾರ್ಮಿಕ ಪೂಜಾ ಕೈಂಕರ್ಯ ನೆರವೇರಿತು. ಹನುಮನಿಗೆ ವಿಶೇಷ ಅಭಿಷೇಕ, ಅಲಂಕಾರ ನಡೆದ ನಂತರ ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಸಾಗರೋಪಾದಿಯಲ್ಲಿ ಜಮಾಯಿಸಿದ್ದರು. ಜತೆಗೆ ಈ ಬಾರಿ ಹನುಮನ ಮುಂದೆ ಯುವಕರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸೆಲ್ಫಿ ಸ್ಪಾಟ್ ವ್ಯವಸ್ಥೆ ಮಾಡಲಾಗಿತ್ತು. ಇದು ಎಲ್ಲರ ಗಮನ ಸೆಳೆಯಿತು. ಎಲ್ಲರೂ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಪೂಜೆಯಲ್ಲಿ ಮಾಜಿ ಶಾಸಕ ಬಿ.ಹರ್ಷವರ್ಧನ್ ಪಾಲ್ಗೊಂಡಿದ್ದರು.