

ಹುಣಸೂರು: ನಗರದಲ್ಲಿ ಹನುಮ ಜಯಂತಿ ವೈಭವ ಮರುಕಳಿಸಲಿ ಎಂದು ಗಾವಡಗೆರೆ ಗುರುಲಿಂಗಜಂಗಮದೇವರ ಮಠದ ಶ್ರೀ ನಟರಾಜ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.
ನಗರದ ಎಸ್‌ಜೆ ರಸ್ತೆಯಲ್ಲಿ ಹನುಮಂತ್ಯುತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ಹನುಮ ಜಯಂತಿ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು. ವೀರಹನುಮ ಭಕ್ತಿಯ ಪ್ರತಿರೂಪ. ಯುವಕರ ಮನದಲ್ಲಿ ಸದಾ ನೆಲೆ ನಿಂತವನು. ಆತನ ಭಕ್ತಿಯಲ್ಲಿ ಶ್ರದ್ಧೆ, ಸತ್ಯ, ಸಂಭ್ರಮವಿದೆ. ಹನುಮ ನಮ್ಮೆಲ್ಲರಿಗೆ ನೈತಿಕ ಸ್ಥೈರ್ಯ ನೀಡಬಲ್ಲ ಪರಾಕ್ರಮಿ. ಕೋವಿಡ್ ಸಂಕಷ್ಟದ ಪರಿಹಾರವಾದ ನಂತರ ಹನುಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಲು ಸಮಿತಿ ಸನ್ನದ್ಧವಾಗಿದೆ. ತಾಲೂಕಿನ ಹನು ಮಭಕ್ತರು ಶ್ರೀರಾಮದೂತನ ಹಬ್ಬವನ್ನು ಸಡಗರದಿಂದ ಆಚರಿಸಿ. ಸಾಮಾಜಿಕ ಸಾಮರಸ್ಯದೊಂದಿಗೆ ಎಲ್ಲರೊಡಗೂಡಿ ಬಾಳುವ ಮಹತ್ವದ ಆಶಯಕ್ಕೆ ಮುನ್ನಡಿ ಹಾಕೋಣ ಎಂದು ಹೇಳಿದರು.
ಮಾದಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವ ಸ್ವಾಮೀಜಿ ಮಾತನಾಡಿ, ಕನ್ನಡ ನಾಡಿನಲ್ಲಿ ಹುಟ್ಟಿದ ಹನುಮ ಕನ್ನಡಿಗರ ಅಸ್ಮಿತೆಯಾಗಿದ್ದಾನೆ ಎಂದು ಹೇಳಿದರು.
ಹನುಮಂತ್ಯುತ್ಸವ ಸಮಿತಿ ಅಧ್ಯಕ್ಷ ವೆಂಕಟನಾರಾಯಣ ದಾಸ್ ಮಾತನಾಡಿ, ಡಿ. 7ರಂದು ಈ ಸಾಲಿನ ಹನುಮಜಯಂತಿ ಅಂಗವಾಗಿನ ಭವ್ಯ ಮೆರವಣಿಗೆ ಆಯೋಜಿಸಲಾಗಿದೆ. ಮೆರವಣಿಗೆಯ ಯಶಸ್ಸಿಗಾಗಿ ಕಾರ್ಯಾಲಯ ಸ್ಥಾಪಿಸಲಾಗಿದೆ ಎಂದರು.
ಹನುಮಜಯಂತಿ ಕಾರ್ಯಕ್ರಮದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು. ಸಮಿತಿ ಉಪಾಧ್ಯಕ್ಷರಾದ ಎಚ್.ವೈ.ಮಹದೇವ್, ವರದರಾಜು ಪಿಳ್ಳೆ, ರಾಚಪ್ಪ, ಕಾರ್ಯದರ್ಶಿ ಅನಿಲ್‌ಕುಮಾರ್, ಖಜಾಂಚಿ ಗಣೇಶ್ ಕುಮಾರ, ಮುಖಂಡರಾದ ಸೂರಜ್, ಸಚ್ಚಿನ್ ಬಾಗಲ್, ಅನೂಪ್, ಮಂಜುನಾಥ್, ಸುಧಾಕರ್, ಮಧು, ವಾಸುಕಿ ಇತರರು ಇದ್ದರು.