

ಹನಗೋಡು: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ತಂಡದ ಸದಸ್ಯರು ಭೇಟಿ ನೀಡಿ ಕಾಲೇಜಿನ ಶೈಕ್ಷಣಿಕ ಹಾಗೂ ಭೌತಿಕ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು.
ನ್ಯಾಕ್ ತಂಡದ ಚೇರ್ಮನ್ ಡಾ.ಜಾವೈದ್ ಅಕ್ತರ್, ಸದಸ್ಯರಾದ ಡಾ.ಸುಧಾಕರ ರೆಡ್ಡಿ, ಡಾ.ಬಾಲಕೃಷ್ಣ ಕಾಂಬ್ಳೆ ಅವರನ್ನು ಪ್ರಾಂಶುಪಾಲ ಡಾ.ಬಸವರಾಜ್ ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ಕಿರಂಗೂರು ಬಸವರಾಜ್ ಬರಮಾಡಿಕೊಂಡರು.
ನ್ಯಾಕ್ ತಂಡದವರೊಂದಿಗೆ ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆದ ಶಾಸಕ ಜಿ.ಡಿ.ಹರೀಶ್‌ಗೌಡ ಅವರು ಸಿಡಿಸಿ ಸಭೆ ನಡೆಸಿ, ಹುಣಸೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಕಾಲೇಜಿನ ವಾತಾವರಣವನ್ನು ಅಣಿಗೊಳಿಸಿದ್ದು, ಇದನ್ನು ಗ್ರಾಮೀಣ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಪ್ರಾಂಶುಪಾಲರಾದ ಡಾ.ಬಸವರಾಜ್ ಅವರು ನ್ಯಾಕ್ ತಂಡದವರಿಗೆ ಪಿಪಿಟಿ ಮೂಲಕ ಕಾಲೇಜು ನಡೆದು ಬಂದ ಹಾದಿ ಹಾಗೂ ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ ಕಾಲೇಜಿನ ಸಾಧನೆಗಳ ಬಗ್ಗೆ ತಿಳಿಸಿದರು. ಕಾಲೇಜಿನ ಹೊರ ಮತ್ತು ಒಳ ಪ್ರಾಂಗಣವನ್ನು ಹಸಿರು ತೋರಣಗಳಿಂದ ಸಿಂಗಾರ ಮಾಡಲಾಗಿತ್ತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಗ್ರಾಪಂ ಅಧ್ಯಕ್ಷೆ ರತ್ನಾ ಶ್ರೀಧರ್, ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯರಾದ ವೆಂಕಟಪ್ಪ, ಎಚ್.ಆರ್ ರಮೇಶ್, ರಾಘವೇಂದ್ರ, ಸಂದೀಪ್, ಶಾಂತಮ್ಮ, ಉದಯನ್, ಶ್ರೀನಿವಾಸ್, ಉಪನ್ಯಾಸಕರಾದ ಡಾ. ಬಾಲರಾಜ್, ರಶ್ಮಿ ಅರಸ್, ಪ್ರಕಾಶ್, ದಿನೇಶ್, ಉಮೇಶ್ , ಗಂಗೂ ಗೋವಿಂದರಾಜು, ವೇಣುಗೋಪಾಲ್, ಅನಿತಾ, ಹಿರಿಯ ವಿದ್ಯಾರ್ಥಿಗಳು, ಪಾಲಕರು ಹಾಗೂ ಗ್ರಾಪಂ ಸದಸ್ಯರು ಹಾಜರಿದ್ದರು.