

ಆಲ್ದೂರು: ಮಲೆನಾಡು ಭಾಗದ ಪ್ರಮುಖ ರಸ್ತೆಗಳು ಹದಗೆಟ್ಟಿದ್ದು ಪ್ರಯಾಣ ದುಸ್ತರವಾಗಿದೆ. ರಸ್ತೆಯ ಅವ್ಯವಸ್ಥೆಗೆ ಜಿಲ್ಲೆಯ ಪ್ರವಾಸ ಕೈಗೊಂಡಿದ್ದ ಉಪಲೋಕಾಯುಕ್ತ ಕೆ.ಎನ್.ಣೀಂದ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರು-ಹಾಸನ ರಸ್ತೆ ಹಾಗೂ ಚಿಕ್ಕಮಗಳೂರು ತಾಲೂಕಿನ ಆಲ್ದೂರು ರಸ್ತೆಯ ಬಗ್ಗೆ ಸುಮೊಟೋ ಪ್ರಕರಣ ದಾಖಲಿಸಲಾಗಿದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಆಲ್ದೂರಿನಿಂದ ಚಿಕ್ಕಮಗಳೂರಿನ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಮೂಡಿಗೆರೆಗೆ ಹಾದುಹೋಗುವ ರಸ್ತೆ, ಆಲ್ದೂರಿನಿಂದ ಬಾಳೆಹೊನ್ನೂರಿಗೆ ಸಾಗುವ ಪ್ರಮುಖ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ನವರಾತ್ರಿ ಸಂದರ್ಭದಲ್ಲಿ ಧಾರ್ಮಿಕ ಶಕ್ತಿ ಕೇಂದ್ರಗಳಾದ ಹೊರನಾಡು, ಶೃಂಗೇರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು ಆಲ್ದೂರು ಮಾರ್ಗದಲ್ಲಿಯೇ ಬಹುತೇಕ ಪ್ರವಾಸಿಗರು ಸಾಗುತ್ತಾರೆ. ಗುಂಡಿ ಬಿದ್ದ ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸಲು ತೊಂದರೆ ಅನುಭವಿಸುತ್ತಿದ್ದಾರೆ.
ಮಳೆಗಾಲ ಆರಂಭವಾದ ಕೆಲವೇ ದಿನಗಳಲ್ಲಿ ರಸ್ತೆಗಳಿಗೆ ಗುಂಡಿ ಬಿದ್ದಿದ್ದು ಕ್ಷೇತ್ರದ ಶಾಸಕರ ಗಮನಕ್ಕೆ ತಂದಿದ್ದು ಹಲವು ಬಾರಿ ಗುಂಡಿ ಮುಚ್ಚಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಾರಿ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ರಸ್ತೆಗಳಲ್ಲಿ ಬೃಹದಾಕಾರದ ಗುಂಡಿಗಳು ನಿರ್ಮಾಣವಾಗಿದ್ದು ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿರುವ ಘಟನೆಗಳು ಸಹ ನಡೆದಿವೆ. ಚಿಕ್ಕಮಗಳೂರಿನಿಂದ ಆಲ್ದೂರಿಗೆ ಬರುವ ಮಾರ್ಗದಲ್ಲಿ ಬೀರಂಜಿ ಹಳ್ಳದ ಬಳಿ ತುಂಬ ಹೊಂಡಗಳು ನಿರ್ಮಾಣವಾಗಿದ್ದು ಈ ರಸ್ತೆಯಲ್ಲಿ ಬರುವುದೇ ಸಾಹಸವಾಗಿದೆ. ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚಲು ಎಂ.ಸ್ಯಾಂಡ್ ಹಾಗೂ ಜಲ್ಲಿ ಬಳಕೆ ಮಾಡಿದ್ದು ವಾಹನಗಳು ಓಡಾಡಿದ ನಂತರ ಗುಂಡಿಗಳು ಮತ್ತಷ್ಟು ದೊಡ್ಡದಾಗಿವೆ.