

ಚಿತ್ರದುರ್ಗ: ಬೆಂಗಳೂರಿನಲ್ಲಿ ನನ್ನ ಪುತ್ರ ರೇಣುಕಸ್ವಾಮಿ ಹತ್ಯೆಯಾಗಿ ಜೂ. 8ಕ್ಕೆ ಒಂದು ವರ್ಷವಾಯಿತು. ಹೀಗಾಗಿ ಫಾಸ್ಟ್‌ಟ್ರ್ಯಾಕ್ ಮೂಲಕ ಪ್ರಕರಣ ನಡೆಯಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆತನ ತಂದೆ ಕಾಶಿನಾಥಯ್ಯ ಶಿವನಗೌಡ್ರು ಸರ್ಕಾರಕ್ಕೆ ಮನವಿ ಮಾಡಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಕರಣ ನ್ಯಾಯಾಲಯದಲ್ಲಿದೆ. ನಮಗೆ ದೇಶದ ಕಾನೂನು, ಸರ್ಕಾರ, ಪೊಲೀಸ್ ವ್ಯವಸ್ಥೆ ಕುರಿತು ಅಪಾರ ನಂಬಿಕೆ ಇದೆ. ಹೀಗಾಗಿ ನ್ಯಾಯ ಸಿಗುವ ವಿಶ್ವಾಸದಲ್ಲಿದ್ದೇವೆ ಎಂದರು.
ಪುತ್ರ ಶೋಕ ನಿತಂತರ. ಅದನ್ನು ಮರೆಯಲಾಗದು. ಮೊಮ್ಮಗನ ಆರೈಕೆ, ಆಟದಿಂದ ಪ್ರಯತ್ನಿಸಿದರೂ ಘಟನೆ ಮರೆಯಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಕೊಟ್ಟ ಭರವಸೆ ಮರೆತಂತಿದೆ. ಕಾನೂನಾತ್ಮಕವಾಗಿ ಆಗದಿದ್ದರೆ, ಮಾನವೀಯ ನೆಲೆಗಟ್ಟಿನಲ್ಲಿ ಸೊಸೆಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಒತ್ತಾಯಿಸಿದರು.
ಚಿಕ್ಕಪ್ಪ ಷಡಕ್ಷರಯ್ಯ ಮಾತನಾಡಿ, ರೇಣುಕಸ್ವಾಮಿ ಇಲ್ಲದೆ, ಇಡೀ ಕುಟುಂಬ ಒಂದು ವರ್ಷ ಸಾಕಷ್ಟು ನೋವು ಅನುಭವಿಸಿದೆ. ದರ್ಶನ್ ಬೇಲ್ ಪಡೆದು ಜೈಲಿನಿಂದ ಹೊರಬಂದ ನಂತರ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ. ದೇಶದ ಕಾನೂನು ಇತಿಹಾಸದಲ್ಲಿ ಯಾರನ್ನೂ ಬಿಟ್ಟಿಲ್ಲ. ಹೀಗಾಗಿ ತಪ್ಪು ಯಾರೇ ಮಾಡಿದರೂ ಶಿಕ್ಷೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರೇಣುಕಸ್ವಾಮಿ ತಾಯಿ ರತ್ನಪ್ರಭಾ, ಪತ್ನಿ ಸಹನಾ ಇದ್ದರು.