ಹಣಕ್ಕಾಗಿಯೇ ವರ್ತೂರು ಪ್ರಕಾಶ್ ಅಪಹರಣ

23-klr-2
Published on

ಕೋಲಾರ : ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು ಅಪಹರಿಸಿದ್ದ ಪ್ರಮುಖ 6 ಆರೋಪಿಗಳನ್ನು ಬಂಧಿಸಲಾಗಿದ್ದು, ತಪ್ಪಿಸಿಕೊಂಡಿರುವ ರೋಹಿತ್ ಪತ್ತೆಗೆ ಪ್ರಯತ್ನ ನಡೆದಿದೆ ಎಂದು ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಹೇಳಿದರು.

ಆರೋಪಿಗಳನ್ನು ಎಲ್ಲ ಆಯಾಮಗಳಿಂದ ವಿಚಾರಿಸಿದಾಗ ಹಣಕ್ಕಾಗಿಯೇ ಕೃತ್ಯ ಎಸಗಿರುವುದು ಗೊತ್ತಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕವಿರಾಜ್ ಸಹಚರರು ಪ್ರೀ ಪ್ಲಾನ್ ಮಾಡಿಕೊಂಡು ನ.25ರಂದು ಬೆಗ್ಲಿಹೊಸಹಳ್ಳಿ ತೋಟದ ಮನೆಯಿಂದ ಕಾರಿನಲ್ಲಿ ಹೊರಟಿದ್ದಾಗ 8 ಜನರ ಗುಂಪು ಕಾರು ಅಡ್ಡಗಟ್ಟಿ ಅಪಹರಿಸಿದ್ದರು. 30 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟು 48 ಲಕ್ಷ ರೂ. ವಸೂಲಿ ಮಾಡಿದ್ದರು. ವರ್ತೂರು ಪ್ರಕಾಶ್ ಬೆಳ್ಳಂದೂರು ಠಾಣೆಯಲ್ಲಿ ದಾಖಲಿಸಿದ ದೂರಿನ ತನಿಖೆಯನ್ನು ಕೋಲಾರ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿತ್ತು. ಎಸ್ಪಿ ಕಾರ್ತಿಕ್ ರೆಡ್ಡಿ ಮಾರ್ಗದರ್ಶನಲ್ಲಿ ಎಎಸ್ಪಿ ಸಾಹಿಲ್ ಬಾಗ್ಲಾ, ಜಾಹ್ನವಿ ನೇತೃತ್ವದಲ್ಲಿ 4 ತಂಡ ರಚಿಸಿ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಆಂಧ್ರದಲ್ಲಿ ಶೋಧ ನಡೆಸಿ ಪ್ರಮುಖ ಆರೋಪಿ ಡಿ.ಕವಿರಾಜ್‌ನನ್ನು ತಮಿಳುನಾಡಿನ ಮಧುರೈನಲ್ಲಿ ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ತಪ್ಪಿಸಿಕೊಂಡಿದ್ದಾನೆ ಎಂದರು.

ಆರೋಪಿಗಳ ವಿವರ: ಕವಿರಾಜ್ ಸಹಚರರಾದ ಬೆಳ್ಳಂದೂರು-ಸರ್ಜಾಪುರ ರಸ್ತೆಯ ಅರಳೂರಿನ ಬಿಕಾಂ ವಿದ್ಯಾರ್ಥಿ ಎಸ್.ಲಿಖಿತ್, ಅದೇ ಗ್ರಾಮದ ಎಚ್.ಎ.ಉಲ್ಲಾಸ್, ಪ್ರವೀಣ್, ಬೆಂಗಳೂರಿನ ಯಲ್ಲುಕುಂಟೆ ನಿವಾಸಿ ಮನೋಜ್ ಹಾಗೂ ವೈಟ್‌ಫೀಲ್ಡ್ ಸಮೀಪದ ಅಗದೂರಿನ ಎನ್.ರಾಘವೇಂದ್ರ ಎಂಬುವವರನ್ನು ಬಂಧಿಸಲಾಗಿದೆ. 48 ಲಕ್ಷ ರೂ. ಪೈಕಿ 20.50 ಲಕ್ಷ ರೂ. ನಗದು, ಇನ್ನೋವಾ ಕಾರು, 2 ಮಾರುತಿ ಸ್ವ್‌ಟಿ ಕಾರುಗಳು, 1 ಮಾರುತಿ ರಿಟ್ಜ್ ಕಾರು, 1 ಕೆಟಿಎಂ ಡ್ಯೂಕ್ ಬೈಕ್ ಹಾಗೂ ರಾಡು, ಚಾಕು ವಶಪಡಿಸಿಕೊಳ್ಳಲಾಗಿದೆ ಎಂದರು.

50 ಸಾವಿರ ನಗದು ಪುರಸ್ಕಾರ: ಆರೋಪಿಗಳ ಪತ್ತೆಗೆ ಶ್ರಮಿಸಿದ ಗ್ರಾಮಾಂತರ ಸಿಪಿಐ ಎಲ್.ಆಂಜಪ್ಪ, ರಾಬರ್ಟ್‌ಸನ್‌ಪೇಟೆ ಸಿಪಿಐ ಸೂರ್ಯಪ್ರಕಾಶ್, ರಾಮನಗರ ಜಿಲ್ಲೆಯ ಸಿಪಿಐ ಶಿವಶಂಕರ್, ಶ್ರೀನಿವಾಸಪುರ ಸಿಪಿಐ ರಾಘವೇಂದ್ರ, ಕೋಲಾರ ನಗರ ಸಿಪಿಐ ವೈ.ಆರ್.ರಂಗದಾಮಯ್ಯ, ಪಿಎಸ್‌ಐಗಳಾದ ಜಗದೀಶ್, ಗೋಪಾಲನಾಯಕ್, ಕೇಶವಮೂರ್ತಿ, ವಿ.ಕಿರಣ್, ಅಣ್ಣಯ್ಯ, ಪ್ರದೀಪ್, ಎಎಸ್‌ಐಗಳಾದ ಸೈಯದ್ ಖಾಸೀಂ, ಎಚ್.ಸಿ.ಮಂಜುನಾಥ್, ಮುಖ್ಯಪೇದೆಗಳಾದ ಟಿ.ಎ.ನಾಗರಾಜ್, ಎಲ್.ಮಂಜುನಾಥ್, ಎಸ್.ಎನ್.ಭಾಸ್ಕರ್, ಪಿಸಿಗಳಾದ ಆಂಜಪ್ಪ, ಅಂಬರೀಷ್, ಆನಂದ್, ಶಿವಕುಮಾರ್, ವೆಂಕಟರಮಣ, ಶ್ರೀನಾಥ್, ನವೀನ್, ಸುರೇಶ್, ರಂಜಿತ್ ಕಾರ್ಯನಿರ್ವಹಿಸಿದ್ದು ಇವರಿಗೆ 50 ಸಾವಿರ ರೂ. ನಗದು ಬಹುಮಾನದ ಜತೆಗೆ ಪ್ರಮಾಣ ಪತ್ರ ನೀಡಿ ಪುರಸ್ಕರಿಸಲಾಯಿತು. ಎಸ್ಪಿ ಕಾರ್ತಿಕ್ ರೆಡ್ಡಿ, ಎಎಸ್‌ಪಿಗಳಾದ ಜಾಹ್ನವಿ, ಸಾಹಿಲ್ ಬಾಗ್ಲಾ ಸುದ್ದಿಗೋಷ್ಠಿಯಲ್ಲಿದ್ದರು.

ಕವಿರಾಜ್ ವಿರುದ್ಧ ವಿವಿಧ ಠಾಣೆಗಳಲ್ಲಿ 10 ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ವರ್ತೂರು ಪ್ರಕಾಶ್‌ಗೆ ಮೊದಲಿನಿಂದಲೂ ಪರಿಚಯವಿರುವ ಬಗ್ಗೆ ತಿಳಿದಿಲ್ಲ. ಕವಿರಾಜ್ ಭೂಗತ ಜಗತ್ತಿನ ರವಿಪೂಜಾರಿಯ ನಿಕಟವರ್ತಿ ಎಂಬುದೂ ಗೊತ್ತಾಗಿಲ್ಲ. ಸೀಮಂತ್‌ಕುಮಾರ್ ಸಿಂಗ್, ಕೇಂದ್ರವಲಯ ಐಜಿಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net