

ಬಾಳೆಹೊನ್ನೂರು: ಬಿ.ಕಣಬೂರು ಗ್ರಾಪಂ ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಿಂದ ಕಸ ವಿಲೇವಾರಿ ಮಾಡದ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧೆಡೆ ಹಾಗೂ ಮುಖ್ಯರಸ್ತೆಗಳ ಬದಿ ಕಸ ತುಂಬಿ ತುಳುಕುತ್ತಿದ್ದು ದುರ್ವಾಸನೆ ಬೀರುತ್ತಿದೆ.
ಸೆ.1ರಿಂದ ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ಕಸ ವಿಲೇವಾರಿ ಮಾಡುವ ಜವಾಬ್ದಾರಿಯನ್ನು ಸ್ಥಳೀಯ ಸೀಶಕ್ತಿ ಸ್ವಸಹಾಯ ಸಂಘಗಳಿಗೆ ನೀಡಲಾಗಿತ್ತು. ಆದರೆ ಅವರು ಕಸ ವಿಲೇವಾರಿ ಮಾಡುವ ಘಟಕದಲ್ಲಿ ಈ ಹಿಂದೆ ಇದ್ದ ಹಳೆಯ ಕಸವನ್ನೆಲ್ಲ ಸಂಪೂರ್ಣ ತೆಗೆದುಕೊಟ್ಟರೆ ಹಸಿ, ಒಣ ಕಸಗಳನ್ನು ಪ್ರತ್ಯೇಕವಾಗಿ ವಿಲೇವಾರಿ ಮಾಡಲು ಅನುಕೂಲವಾಗಲಿದೆ ಎಂದು ಗ್ರಾಪಂಗೆ ತಿಳಿಸಿದ್ದರು. ಆದರೆ ಗ್ರಾಪಂ ಆಡಳಿತ ಅಲ್ಲಿನ ಕಸವನ್ನು ತೆರವುಗೊಳಿಸಿರಲಿಲ್ಲ.
ಈ ಹಿನ್ನೆಲೆಯಲ್ಲಿ ಕಸ ವಿಲೇವಾರಿ ಜವಾಬ್ದಾರಿ ಪಡೆದ ಸೀಶಕ್ತಿ ಸ್ವ ಸಹಾಯ ಸಂಘಗಳು ಸೆ.1ರಿಂದ ಕಸ ವಿಲೇವಾರಿಗೆ ಮುಂದಾಗಿರಲಿಲ್ಲ. ಈ ನಡುವೆ ಈ ಹಿಂದೆ ಕಸ ವಿಲೇವಾರಿ ಮಾಡುತ್ತಿದ್ದ ವ್ಯಕ್ತಿಗೆ ಕಳೆದ ಎರಡು ತಿಂಗಳಿನ ಕಸ ವಿಲೇವಾರಿಯ ಹಣ ಗ್ರಾಪಂನಿಂದ ಪಾವತಿಯಾಗಿಲ್ಲ ಎನ್ನಲಾಗುತ್ತಿದೆ. ಇದರಿಂದ ಕೋಪಗೊಂಡ ಕಸ ವಿಲೇವಾರಿ ಮಾಡುತ್ತಿದ್ದ ವ್ಯಕ್ತಿ ರಾತ್ರೋರಾತ್ರಿ ಪಟ್ಟಣದ ವಿವಿಧೆಡೆ ಇಟ್ಟಿದ್ದ ಕಸದ ಬುಟ್ಟಿಗಳಿಂದ ಕಸವನ್ನು ಎಲ್ಲೆಡೆ ಹರಡಿ ಪಟ್ಟಣವನ್ನು ಕಸಮಯಗೊಳಿಸಿ ಗಬ್ಬುನಾರುವಂತೆ ಮಾಡಿದ್ದಾನೆ.
ಈ ವಿಚಾರ ಗ್ರಾಪಂ ಗಮನಕ್ಕೆ ಬರುತ್ತಿದ್ದಂತೆ ಪಟ್ಟಣದ ವಿವಿಧೆಡೆ ಇರುವ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಕಸವನ್ನು ದುರುದ್ದೇಶದಿಂದಲೇ ಪಟ್ಟಣದ ಹಲವು ಕಡೆಗಳಲ್ಲಿ ಮುಖ್ಯರಸ್ತೆ ಬದಿ ಎಸೆಯುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಗ್ರಾಪಂನವರು ಪಟ್ಟಣದಲ್ಲಿ ವಿನಾಕಾರಣ ಕಸ ಎಸೆದು ಅಶುಚಿ ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.