ಹಂದಿಗಳ ಸ್ಥಳಾಂತರಕ್ಕೆ ನಗರಸಭೆಯಿಂದ ದಿಟ್ಟ ಹೆಜ್ಜೆ, 2ನೇ ಹಂತದ ಹಂದಿಗಳ ತೆರವು ಕಾರ್ಯಾಚರಣೆ ಆರಂಭ

Published on

ಹಾವೇರಿ: ನಗರದಲ್ಲಿನ ಹಂದಿಗಳ ನಿರ್ಮೂಲನೆಗೆ ಪಣತೊಟ್ಟಿರುವ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರು 2ನೇ ಹಂತದ ಹಂದಿಗಳ ತೆರವು ಕಾರ್ಯಾಚರಣೆಗೆ ಆರಂಭಿಸಿದ್ದಾರೆ.
ಸೋಮವಾರ ಬೆಳ್ಳಂಬೆಳಗ್ಗೆ ತುಮಕೂರ ಮೂಲದ ಹಂದಿ ಹಿಡಿಯುವ ತಂಡವರನ್ನು ನಗರಕ್ಕೆ ಕರೆಯಿಸಿ ಹಂದಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಚಾಲನೆ ನೀಡಿದರು. ಈಗಾಗಲೇ ನಗರದಲ್ಲಿರುವ ಹಂದಿಗಳ ಹಾವಳಿಯಿಂದ ನಗರದ ನೈರ್ಮಲ್ಯ ಹಾಳಾಗುತ್ತಿತ್ತು. ಅಲ್ಲದೇ ರಸ್ತೆಗಳಲ್ಲಿ ಬೇಕಾಬಿಟ್ಟಿ ಹಂದಿಗಳು ಓಡಾಡುತ್ತಿದ್ದರಿಂದ ವಾಹನ ಸವಾರರಿಗೂ ಅಡಚಣೆ ಉಂಟಾಗಿತ್ತು. ಅನೇಕ ಅಪಘಾತಗಳು ಸಂಭವಿಸಿದ್ದವು. ಇದರ ಕುರಿತು ಜನರು ನಗರಸಭೆಗೆ ಸಾಕಷ್ಟು ದೂರು ನೀಡಿದ್ದರು.
ಹೀಗಾಗಿ ನಗರದಲ್ಲಿ ಹಂದಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವ ಕಾರ್ಯಾಚರಣೆ ಆರಂಭಕ್ಕೂ ಮುನ್ನ ನಗರದಲ್ಲಿರುವ ಹಂದಿಗಳನ್ನು ಸಾಕಾಣಿಕೆ ಮಾಡುತ್ತಿದ್ದವರನ್ನು ನಗರಸಭೆಗೆ ಕರೆಯಿಸಿ ಸಭೆ ನಡೆಸಿ ಅವುಗಳನ್ನು ತೆರವುಗೊಳಿಸುವಂತೆ ಸೂಚಿಸಿದ್ದರು. ಅದರಂತೆ ಅವರು ಇತ್ತೀಚೆಗೆ ಹಂದಿಗಳನ್ನು ಸೆರೆ ಹಿಡಿದಿದ್ದರು. ಆದರೆ ಪೂರ್ಣ ಪ್ರಮಾಣದಲ್ಲಿ ಅವರು ಹಂದಿಗಳನ್ನು ತೆರವುಗೊಳಿಸದೇ ಇದ್ದರಿಂದ ತುಮಕೂರನಿಂದ ಹಂದಿ ಹಿಡಿಯುವ ತಂಡವನ್ನು ಕರೆಯಿಸಿ 2ನೇ ಹಂತದ ಹಂದಿಗಳ ತೆರವು ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ.
ಈ ವೇಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರು ನಗರದಲ್ಲಿ ಇನ್ನು ಬಹಳಷ್ಟು ಸಂಖ್ಯೆಯಲ್ಲಿ ಹಂದಿಗಳಿದ್ದು, ಅವುಗಳನ್ನು ನಗರದಿಂದ ಸ್ಥಳಾಂತರಿಸಲು ಹಂದಿಗಳ ಮಾಲೀಕರಿಗೆ ಈಗಾಗಲೇ ಸೂಚಿಸಲಾಗಿದೆ. ಅವರು ಇತ್ತೀಚೆಗೆ ಅವುಗಳ ಸ್ಥಳಾಂತರಕ್ಕೆ ಮುಂದಾಗಿದ್ದರು. ಆದರೂ ಹಂದಿಗಳ ಹಾವಳಿ ಸಂಪೂರ್ಣ ನಿಂತಿಲ್ಲ. ಹೀಗಾಗಿ 2ನೇ ಹಂತದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದರು.
ಈ ಕಾರ್ಯಾಚರಣೆ ಸಮಯದಲ್ಲಿ ಪೌರಾಯುಕ್ತ ವಿ.ಎಂ. ಪೂಜಾರ ಹಾಗೂ ನಗರಸಭೆ ಸಿಬ್ಬಂದಿ, ಪೌರಕಾರ್ಮಿಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net