

ಕೊಕಟನೂರ: ಸ್ವಾಮಿತ್ವ ಯೋಜನೆಯಿಂದ ಆಸ್ತಿ ದಾಖಲೆ ಗುರುತಿಸಲು ಅನುಕೂಲವಾಗಲಿದ್ದು, ಭವಿಷ್ಯದಲ್ಲೂ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ತಾಲೂಕಿನ ಬಡಚಿ ಗ್ರಾಮದಲ್ಲಿ ಸೋಮವಾರ ಪಂಚಾಯತ್ ರಾಜ್, ಭಾರತೀಯ ಸರ್ವೇಕ್ಷಣಾ ಮತ್ತು ಭೂಮಾಪನ ಇಲಾಖೆ ಸಹಯೋಗದಲ್ಲಿ ಗ್ರಾಮೀಣ ಆಸ್ತಿಗಳ ಗಣಕೀಕೃತ ಆಸ್ತಿಪತ್ರ ವಿತರಣೆ ಸಮಾರಂಭದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ತಾಲೂಕಿನ ಅರಟಾಳ, ಬಡಚಿ ಗ್ರಾಮಗಳ ಸ್ವಾಮಿತ್ವ ಯೋಜನೆ ಪೂರ್ಣವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ಸ್ವಾಮಿತ್ವ ಯೋಜನೆ ಮೂಲಕ ಗ್ರಾಮಗಳ ಆಸ್ತಿ ಗುರುತಿಸುವ ಕಾರ್ಯವಾಗಿದೆ. ಈ ಯೋಜನೆಯಲ್ಲಿ ರೈತನ ಸಂಪೂರ್ಣ ಆಸ್ತಿ ದಾಖಲಾಗಿರುತ್ತದೆ.
ಇದು ದೇಶದ ಪ್ರಗತಿಯ ಸಂಕೇತ. ಬ್ಯಾಂಕ್ ಲೋನ್ ಹಾಗೂ ಸರ್ಕಾರಿ ಸವಲತ್ತು ಪಡೆಯಲು ಈ ಕಾರ್ಡ್ ಅನುಕೂಲವಾಗುತ್ತದೆ ಎಂದರು. ಕರೊನಾ 2ನೇ ಅಲೆ ಪರಿಣಾಮ ಲಾಕ್‌ಡೌನ್ ಘೋಷಣೆಯಾಗಿ 90 ದಿನ ಬಸ್ ಸಂಚಾರ ನಿಲ್ಲಿಸಲಾಗಿತ್ತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅನ್‌ಲಾಕ್ ಆದೇಶ ಮಾಡಿದ ಹಿನ್ನೆಲೆಯಲ್ಲಿ ಬಸ್ ಸಂಚಾರ ಪ್ರಾರಂಭವಾಗಿದ್ದು ಸಂತಸದ ವಿಚಾರ ಎಂದರು.
ಭೂ ಮಾಪನಾ ಇಲಾಖೆ ಡಿಡಿಎಲ್‌ಆರ್ ಮೋಹನ ಶಿವಣ್ಣವರ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಪ್ರಥಮವಾಗಿ ಅರಟಾಳ, ಹಾಲಳ್ಳಿ, ಬಾಡಗಿ ಹಾಗೂ ಬಡಚಿ ಗ್ರಾಮಗಳನ್ನು ಸ್ವಾಮಿತ್ವ ಯೋಜನೆಯಡಿ ಆಯ್ಕೆ ಮಾಡಿಕೊಂಡಿದ್ದು, ಡ್ರೋಣ್ ಮೂಲಕ ಸಮೀಕ್ಷೆ ಮಾಡಲಾಯಿತು ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೀರ್ತಿ ಚವ್ಹಾಣ ಅಧ್ಯಕ್ಷತೆ ವಹಿಸಿದ್ದರು.
ರೋಹಿಣಿ ಮಾದರ, ಸೈಬಣ್ಣ ಕಮತಗಿ, ಅಪ್ಪಾಸಾಬ ಅವತಾಡೆ, ಸಿ.ಎಸ್. ನೇಮಗೌಡ, ಶ್ರೀಶೈಲ ನಾಯಿಕ ಸುರೇಶ ಗುಳಪ್ಪನವರ, ತಾಪಂ ಸದಸ್ಯ ಜಯವಂತರಾವ ದೇಸಾಯಿ, ಎಡಿಎಲ್‌ಆರ್ ಪುನೀತ್ ಪಾಸೋಡಿ, ಆರ್.ಎ. ಪರ್ನಾಂಡಿಸ್, ಎಸ್.ಎಸ್. ಬಿರಾದಾರ ಇತರರಿದ್ದರು. ಎನ್.ಬಿ. ರಾಠೋಡ ಸ್ವಾಗತಿಸಿದರು. ತಾಪಂ ಇಒ ರವೀಂದ್ರ ಬಂಗಾರೆಪ್ಪನವರ ನಿರೂಪಿಸಿದರು.