

ಕಳಸ: ಸ್ವಾಮಿ ವಿವೇಕಾನಂದರು ಕೇವಲ ಒಂದು ನಿರ್ದಿಷ್ಟ ಧರ್ಮವನ್ನು ಪ್ರತಿನಿಧಿಸುವ ಸನ್ಯಾಸಿಯಲ್ಲ. ಅವರು ಜಗತ್ತಿನ ಸಮಸ್ತ ಜನರೂ ಸಾಮರಸ್ಯದಿಂದ ಬದುಕಬಹುದಾದ ವಿಶ್ವಧರ್ಮದ ಪ್ರತಿಪಾದಕರು ಎಂದು ವಕೀಲ ಸುಧೀರ್‌ಕುಮಾರ್ ಮುರೊಳ್ಳಿ ಹೇಳಿದರು.
ಕಳಸದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಪ್ರಯುಕ್ತ ಚಿಕ್ಕಮಗಳೂರು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಕಳಸದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕ, ಉದ್ಯೋಗ ಮತ್ತು ಮಾಹಿತಿ ಮಾರ್ಗದರ್ಶನ ಕೋಶ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಯುವನಿಧಿ ನೋಂದಣಿ ಕಾರ್ಯಕ್ರಮದಲ್ಲಿ ಮಾತನಾಡಿ, ಅವರ ವಿಚಾರಗಳು ಪ್ರಸ್ತುತ ಭಾರತದ ಧಾರ್ಮಿಕ ಧ್ರುವೀಕರಣದ ಸಂದರ್ಭದಲ್ಲಿ ಹಿಂದೆಂದಿಗಿಂತಲೂ ಪ್ರಸ್ತುತವಾಗಿವೆ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ರಾಜೇಂದ್ರ ಹೆಬ್ಬಾರ್ ಹಿತ್ಲಮಕ್ಕಿ ಮಾತನಾಡಿ, ಸ್ವಾಮಿ ವಿವೇಕಾನಂದರು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವ ಮುಂಚೆಯೇ ಜನರಲ್ಲಿ ಭಾರತೀಯತೆ ಭಾವನೆಯನ್ನು ಜಾಗ್ರತಗೊಳಿಸಲು ಶ್ರಮಿಸಿದ ಧೀಮಂತರು. ಇಂದಿನ ವಿದ್ಯಾರ್ಥಿಗಳು ಅವರಿಂದ ಸ್ಫೂರ್ತಿ ಪಡೆದು ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಚಿಕ್ಕಮಗಳೂರಿನ ಜಿಲ್ಲಾ ಉದ್ಯೋಗ ವಿನಿಮಯ ಕಚೆೇರಿಯ ಅಧಿಕಾರಿಗಳು ರಾಜ್ಯ ಸರ್ಕಾರದ ಯುವನಿಧಿ ಯೋಜನೆಯ ಪ್ರಯೋಜನವನ್ನು ಪಡೆಯಲು ಇರಬೇಕಾದ ಅರ್ಹತೆಗಳ ಬಗ್ಗೆ ಮಾಹಿತಿ ನೀಡಿದರು ಹಾಗೂ ಲಾನುಭವಿಗಳ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ವಿನಯಕುಮಾರ್ ಶೆಟ್ಟಿ, ಕಳಸ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಗಣೇಶ್ ಭಟ್, ಯೂತ್ ಎಂಪ್ಲಾಯೆಬಿಲಿಟಿ ಸ್ಕಿಲ್ಸ್ ಸೆಂಟರ್ ಚಿಕ್ಕಮಗಳೂರು ಡಿಇಒ ಪೂರ್ಣಚಂದ್ರ ಅರಸ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಸುಜಿತ್ ಜೈನ್, ಯುವ ರೆಡ್‌ಕ್ರಾಸ್ ಘಟಕದ ಸಂಚಾಲಕ ಸೋಮಶೇಖರ , ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ವಿಶುಕುಮಾರ್, ರೋವರ್ಸ್ ಘಟಕ ಸಂಚಾಲಕ ಡಾ. ಪುನೀತ್‌ಕುಮಾರ್, ರೇಂಜರ್ಸ್ ಘಟಕದ ಸಂಚಾಲಕಿ ಎನ್.ನಿವೇದಿತಾ, ಆಂತರಿಕ ಗುಣಮಟ್ಟ ಭರವಸಾ ಕೋಶ ಸಂಚಾಲಕ ಡಾ. ಆದಿತ್ಯ ಉಪಸ್ಥಿತರಿದ್ದರು.