

ಕೆ.ಆರ್.ನಗರ: ರಾಜನಿಷ್ಠೆಗೆ ಹೆಸರಾದವರು ಸಂಗೊಳ್ಳಿ ರಾಯಣ್ಣ. ಕಿತ್ತೂರು ಸಂಸ್ಥಾನದ ಅಪ್ರತಿಮ ರಾಜನಿಷ್ಠರಾಗಿ ಬ್ರಿಟಿಷ್ ಸೈನ್ಯದ ವಿರುದ್ಧ ಶೌರ್ಯ, ಪರಾಕ್ರಮ ತೋರಿದ ದೇಶಭಕ್ತ ಎಂದು ತಾಲೂಕು ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಗಂಧನಹಳ್ಳಿ ಹೇಮಂತ್ ಹೇಳಿದರು.
ತಾಲೂಕಿನ ಗಂಧನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಂಗೊಳ್ಳಿ ರಾಯಣ್ಣರ 226ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ ಅವರು, ಸ್ವಾತಂತ್ರ್ಯದ ಕಹಳೆ ಊದಿದ ಮೊದಲ ಕನ್ನಡಿಗ ರಾಯಣ್ಣ ಸ್ವಾಮಿ ಭಕ್ತಿ ಹಾಗೂ ದೇಶ ಭಕ್ತಿಗೆ ಹೆಸರಾದವರು. ದೇಶದ ಸ್ವಾತಂತ್ರೃಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ರಾಯಣ್ಣ ಅವರ ದೇಶಭಕ್ತಿ ಹಾಗೂ ವಿಚಾರಧಾರೆಗಳನ್ನೂ ಇಂದಿನ ಯುವಕರು ಮೈಗೂಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಕಿತ್ತೂರು ಸಂಸ್ಥಾನಕ್ಕೆ ಕಪ್ಪ ನೀಡಬೇಕೆಂದು ಬ್ರಿಟಿಷರು ಅದೇಶ ಹೊರಡಿಸಿದಾಗ ರಾಣಿ ಚನ್ನಮ್ಮ ಅದನ್ನು ವಿರೋಧಿಸಿ ಬ್ರಿಟಿಷರ ವಿರುದ್ಧ ಯುದ್ಧಕ್ಕೆ ನಿಂತರು. ಅವರನ್ನು ಬೆಂಬಲಿಸಿ ಕಿತ್ತೂರು ಸಂಸ್ಥಾನ ಉಳಿವಿಗೆ ಅವಿರತ ಹೋರಾಟ ಮಾಡಿದ ರಾಯಣ್ಣ 1831ರ ಜನವರಿ 26 ರಂದು ಬ್ರಿಟಿಷರಿಂದ ನೇಣಿಗೆ ಶರಣಾದರು. ಅವರು ಹುಟ್ಟಿದ್ದು ಆಗಸ್ಟ್ 15, ಇಹಲೋಕ ತ್ಯಜಿಸಿದ್ದು ಜನವರಿ 26. ಮುಂದೆ ಭಾರತ ಸ್ವಾತಂತ್ರೃ ಪಡೆದ ಹಾಗೂ ಸಂವಿಧಾನ ಅಚರಣೆಗೆ ಬಂದ ಈ ಎರಡು ದಿನಗಳು ಮಹತ್ವ ಪಡೆದುಕೊಂಡಿವೆ ಎಂದು ತಿಳಿಸಿದರು.
ರಾಯಣ್ಣನ ಸ್ಮರಣೆ ಶಾಶ್ವತವಾಗಿ ಕನ್ನಡಿಗರ ಮನೆ, ಮನಗಳಲ್ಲಿ ಶಾಶ್ವತವಾಗಿ ನಿಲ್ಲಲಿ. ಇತ್ತೀಚಿನ ದಿನಗಳಲ್ಲಿ ರಾಯಣ್ಣ ಅವರನ್ನು ಒಂದು ಸಮುದಾಯಕ್ಕೆ, ಜಾತಿಗೆ ಸೀಮೀತ ಮಾಡುತ್ತಿರುವುದು ವಿಷಾದದ ಸಂಗತಿ. ಸದ್ಯದಲ್ಲೇ ಸರ್ಕಾರಿ ಕಚೇರಿ ಮತ್ತು ಶಾಲಾ ಕಾಲೇಜುಗಳಲ್ಲಿ ಸಂಗೊಳ್ಳಿ ರಾಯಣ್ಣ ಭಾವಚಿತ್ರ ಅಳವಡಿಕೆ ಕಡ್ಡಾಯ ಆದೇಶ ಹೊರಡಿಸುವುದಾಗಿ ಹೇಳಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕನಕ ಸಂಘದ ಅಧ್ಯಕ್ಷ ಜಿ.ಜಿ.ಕೆಂಪರಾಜು, ಕಾರ್ಯದರ್ಶಿ ಜಯರಾಜ್, ಪದಾಧಿಕಾರಿಗಳಾದ ಹರೀಶ್ ಅಚಾರ್, ಈಶ್ವರ್, ಪ್ರತಾಪ್, ಪ್ರವೀಣ್, ಮುಖಂಡರಾದ ಜಿ.ಎನ್.ಮಂಜುನಾಥ್, ಸಂತೋಷ್, ಅಂಗಡಿ ಮಧು, ಪ್ರಸನ್ನ ಕುಮಾರ್, ಅಂಗನವಾಡಿ ಶಿಕ್ಷಕಿ ರೇಣುಕಾ ಹಾಜರಿದ್ದರು.