ಸ್ವಚ್ಛ ಮೈಸೂರಿಗೆ ಪೌರಕಾರ್ಮಿಕರ ಪಾತ್ರ ಅಪಾರ

2
Published on

ನಮ್ಮ ಸುತ್ತಮುತ್ತ ಸ್ವಚ್ಛತೆ ಇದ್ದರೆ ಪರಿಸರವೂ ಸ್ವಚ್ಛವಾಗಿರುತ್ತದೆ. ಆರೋಗ್ಯವೂ ಚೆನ್ನಾಗಿರುತ್ತದೆ. ಪೌರಕಾರ್ಮಿಕರ ಶ್ರಮದಿಂದಲೇ ಮೈಸೂರು ನಗರಕ್ಕೆ ಹಲವು ಬಾರಿ ಸ್ವಚ್ಛತಾ ನಗರಿ ಪ್ರಶಸ್ತಿ ಲಭ್ಯವಾಗಿದೆ. ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅಪಾರ ಎಂದು ಶಾಸಕ ಜಿ.ಟಿ. ದೇವೇಗೌಡ ಶ್ಲಾಘಿಸಿದರು.

ಕನ್ನಡಾಂಬೆ ರಕ್ಷಣಾ ವೇದಿಕೆ ವತಿಯಿಂದ ಹೂಟಗಳ್ಳಿಯ ಸರಸ್ವತಿ ಸಮುದಾಯ ಭವನದಲ್ಲಿ ಬುಧವಾರ ಬಸವ ಜಯಂತಿ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಅಂಗವಾಗಿ ಆಯೋಜಿಸಿದ್ದ ಪೌರಕಾರ್ಮಿಕರಿಗೆ ಬಟ್ಟೆ ವಿತರಣೆ ಹಾಗೂ ಸಹಪಂಕ್ತಿ ಭೋಜನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಸವಣ್ಣನವರು ಹನ್ನೆರಡನೇ ಶತಮಾನದಲ್ಲಿಯೇ ಕಾಯಕವೇ ಕೈಲಾಸ ಎಂಬ ತತ್ವ ಸಾರಿದ್ದರು. ಸೇವೆ ಮಾಡುವ ಎಲ್ಲರೂ ಇದನ್ನು ಅರಿತುಕೊಳ್ಳಬೇಕು. ಅದೇ ರೀತಿ ಮೈಸೂರನ್ನು ಆಳಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಇಡೀ ದೇಶಕ್ಕೆ ಮಾದರಿಯಾದ ಆಡಳಿತ ನೀಡಿದ್ದರು. ಸಮಾಜಮುಖಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದವರು ಎಂದು ಹೇಳಿದರು.

ಬಸವಣ್ಣ ಹಾಗೂ ನಾಲ್ವಡಿ ಅವರ ಜಯಂತಿ ಅಂಗವಾಗಿ ಪೌರಕಾರ್ಮಿಕರಿಗೆ ಉಚಿತವಾಗಿ ಬಟ್ಟೆ ವಿತರಿಸಿ, ಅವರೊಂದಿಗೆ ಸಹಪಂಕ್ತಿ ಭೋಜನ ಮಾಡುತ್ತಿರುವುದು ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮ ಎಂದರು.

ಬಿಜೆಪಿ ಮುಖಂಡ ವಿ.ಕವೀಶ್‌ಗೌಡ ಮಾತನಾಡಿ, ಪೌರಕಾರ್ಮಿಕರ ಸೇವೆಯ ಬಗ್ಗೆ ಅಪಾರವಾದ ಗೌರವವಿದೆ. ನೀವು ನಗರ, ಪಟ್ಟಣ ಪ್ರದೇಶಗಳ ಸ್ವಚ್ಛತೆಯ ಜತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಉನ್ನತ ಹುದ್ದೆಗಳಿಗೆ ಏರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಬೇಬಿಬೆಟ್ಟದ ಶ್ರೀ ರಾಮಯೋಗೇಶ್ವರ ಮಠದ ಶ್ರೀ ಶಿವಬಸವ ಸ್ವಾಮೀಜಿ ಮಾತನಾಡಿ, ಬ್ರಾಹ್ಮಣರಾಗಿ ಹುಟ್ಟಿದ ಬಸವಣ್ಣ ಮೌಢ್ಯ, ಕಂದಾಚಾರ ವಿರೋಧಿಸಿ, ವಿಶ್ವಗುರು ಎನಿಸಿಕೊಂಡರು. ಅವರು ತೋರಿಸಿದ ಮಾರ್ಗ, ಮಾಡಿದ ಸಾಧನೆ ನಮಗೆ ದಾರಿದೀಪವಾಗಿದೆ ಎಂದರು.

ಅದೇ ರೀತಿ ನಾಲ್ವಡಿ ಅವರು ಮಾಡಿದ ಜನೋಪಯೋಗಿ ಕೆಲಸಗಳಿಂದಾಗಿ ಮೈಸೂರು ರಾಜಮನೆತನದ ಬಗ್ಗೆ ಅಪಾರವಾದ ಗೌರವವಿದೆ. ಪ್ರತಿಯೊಬ್ಬರೂ ಮನೆಯಲ್ಲಿ ನಾಲ್ವಡಿಯವರ ಫೋಟೋ ಇಟ್ಟು ಪೂಜಿಸಬೇಕು ಎಂದು ಹೇಳಿದರು.

ಸರ್ಕಾರ ನಮಗೆ ಬೇಕಾದನ್ನೆಲ್ಲ ಕೊಡುತ್ತಿದೆ ಎಂಬ ಕಾರಣದಿಂದ ಕೆಲವರು ದುಡಿಯುವುದನ್ನೇ ಬಿಟ್ಟಿದ್ದಾರೆ. ಈ ರೀತಿಯಾಗಬಾರದು. ದುಡಿದು ತಿನ್ನಬೇಕು. ರೈತಾಪಿ ವರ್ಗ ಬೆಳೆಯದಿದ್ದಲ್ಲಿ ಯಾರಿಗೂ ಅನ್ನ ಸಿಗುವುದಿಲ್ಲ. ಅದೇ ರೀತಿ ಪೌರಕಾರ್ಮಿಕರು ಸ್ವಚ್ಛ ಮಾಡದಿದ್ದಲ್ಲಿ ನಮ್ಮ ಪರಿಸರ ಏನಾಗುತ್ತದೆ ಯೋಜಿಸಿ ಎಂದರು.

ಎಲ್ಲಕ್ಕೂ ಸ್ಥಳೀಯ ಸಂಸ್ಥೆಗಳನ್ನು ಕಾಯದೇ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಬೇಕು ಎಂದು ಸಲಹೆ ನೀಡಿದರು.

ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಮಾತನಾಡಿ, ಪೌರಕಾರ್ಮಿಕರು ದೇವರ ಸಮಾನ ಎಂದರು. ಜಿ.ಪಂ.ಮಾಜಿ ಅಧ್ಯಕ್ಷ ಕೂರ್ಗಳ್ಳಿ ಮಹದೇವ್ ಮಾತನಾಡಿ, ನಮ್ಮ ಮಟ್ಟದಲ್ಲಿ ಪೌರಕಾರ್ಮಿಕರಿಗೆ ಸಾಧ್ಯವಾದಷ್ಟು ಸೇವೆ ಮಾಡಲಾಗಿದೆ ಎಂದರು. ಹೂಟಗಳ್ಳಿ ನಗರಸಭೆ ಆಯುಕ್ತ ಚಂದ್ರಶೇಖರ್ ಮಾತನಾಡಿ, ಪೌರಕಾರ್ಮಿಕರಿಂದಾಗಿಯೇ ನಾವು ಸ್ವಚ್ಛತಾ ಕಾರ್ಯ ಮಾಡಲು ಸಾಧ್ಯವಾಗಿದೆ ಎಂದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸೈನಿಕ ಅಕಾಡೆಮಿ ಮುಖ್ಯಸ್ಥ ಶ್ರೀಧರ್, ಸೆಸ್ಕ್ ಎಇಇ ಕೆ.ಕೆ.ಲಕ್ಷ್ಮೀಶ್, ಗೃಹ ನಿರ್ಮಾಣ ಸಂಘದ ಅಧ್ಯಕ್ಷ ಎಸ್. ರವಿ, ಕನ್ನಡಾಂಬೆ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಬಿ.ರಾಜಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net