ಸ್ವಚ್ಚತಾ ಕಾರ್ಮಿಕರಿಗೆ ಸಹಕಾರ ನೀಡಿ

6 HBD 1
ಹುಮನಾಬಾದ್ ತಾಪಂ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸ್ವಚ್ಚತಾ ಕಾರ್ಮಿಕರನ್ನು ಜಿಪಂ ಸಿಇಒ ಡಾ.ಗಿರೀಶ್ ಬದೋಲೆ ಸನ್ಮಾನಿಸಿದರು. ತಾಪಂ ಇಒ ದೀಪಿಕಾ ನಾಯ್ಕರ್, ಡಾ.ಗೌತಮï ಅರಳಿ ಇತರರಿದ್ದರು.
Published on

ಹುಮನಾಬಾದ್: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಚತಾ ಕಾರ್ಮಿಕರಿಗೆ ಗ್ರಾಮಸ್ಥರು ಸಹಕಾರ ನೀಡಿ ಸ್ವಚ್ಚತೆಗೆ ಕೈಜೋಡಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್​ ದಿಲೀಪ ಬದೋಲೆ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್​ ಇಲಾಖೆ ಸಿಬ್ಬಂದಿಗೆ ಮತ್ತು ಸ್ವಚ್ಚತಾ ಕಾರ್ಮಿಕರಿಗೆ ಬುಧವಾರ ಏರ್ಪಡಿಸಿದ್ದ ಆರೋಗ್ಯ ತಪಾಸಣೆ ಶಿಬಿರ, ಸ್ವಚ್ಚತೆಯಲ್ಲಿ ಮುಂದಿರುವ ಗ್ರಾಪಂಗಳಿಗೆ ಸನ್ಮಾನ ಹಾಗೂ ಗ್ರಾಪಂ ಗ್ರಂಥಾಲಯಗಳಿಗೆ ಸಂವಿಧಾನದ ಪುಸ್ತಕ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಸಮುಕ್ತ ಗ್ರಾಮಗಳಾಗಿ ನಿರ್ಮಾಣ ಮಾಡಲು ಕಾರ್ಮಿಕರು ದಿನ ಬೆಳಗಾದರೆ ಸಾಕು, ಮನೆ ಮನೆಗಳಿಗೆ ತೆರಳಿ ಕಸ ತೆಗೆದುಕೊಂಡು ಹೋಗುವುದರ ಜತೆಗೆ ರೋಗಮುಕ್ತ ಗ್ರಾಮಗಳನ್ನಾಗಿ ನಿರ್ಮಾಣ ಮಾಡುತ್ತಿದ್ದು, ಅವರ ಆರೋಗ್ಯವೂ ಮುಖ್ಯವಾಗಿದೆ ಎಂದು ಹೇಳಿದರು.

ಪ್ರತಿಯೊಂದು ಗ್ರಾಮಗಳಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡುವುದು ಅಗತ್ಯವಾಗಿದೆ ಎಂದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕರ್ ಮಾತನಾಡಿ, ಯಾವುದೇ ಇಲಾಖೆಯಲ್ಲಿ ಪ್ರಗತಿ ಸಾಧಿಸಬೇಕಾದರೆ ಎಲ್ಲ ಸಿಬ್ಬಂದಿ ಒಗ್ಗಟ್ಟಾಗಿ ಕೆಲಸ ಮಾಡಿದರೆ ಮಾತ್ರ ಸಾಧನೆ ಮಾಡಬಹುದು. ಈ ನಿಟ್ಟಿನಲ್ಲಿ ನಮ್ಮ ಗ್ರಾಪಂನ ಎಲ್ಲ ಸಿಬ್ಬಂದಿ ಹೆಚ್ಚು ತೆರಿಗೆ ವಸೂಲಾತಿ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಪಂ ಯೋಜನಾ ನಿರ್ದೇಶಕ ಜಗನ್ನಾಥ ಮೂರ್ತಿ,  ಡಾ. ಗೌತಮ ಅರಳಿ,  ಜಗನ್ನಾಥ, ಶಿವಲೀಲಾ,  ನಾಗೇಂದ್ರ ಮಡ್ರೆ ತಾ ಪಂ, ಗ್ರಾಪಂ ಸಿಬ್ಬಂದಿ ಇದ್ದರು.

ಕಾರ್ಮಿಕರಿಗೆ ಹಾಗೂ ಹೆಚ್ಚಿನ ತೆರಿಗೆ ವಸೂಲಾತಿಯಲ್ಲಿ ಸಾಧನೆ ಮಾಡಿರುವ ಪಿಡಿಒಗಳಾದ ವೀರಣ್ಣ ಜಮಾದಾರ, ರಾಜಶೇಖರ ಬುಳ್ಳಾ, ಮಲ್ಲಿಕಾರ್ಜುನ ಸಾಗರ, ನಾಗಯ್ಯ ಸ್ವಾಮಿ, ಮಲ್ಲಪ್ಪ ಸೊನ್ನದ, ಮಧು ದೇಶಪಾಂಡೆ ಸೇರಿ ಇತರರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಗ್ರಾಮೀಣ ಜನರಲ್ಲಿ ಅಕ್ಷರ ಪ್ರೀತಿ ಮೂಡಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳನ್ನು ಪುಸ್ತಕ ಗ್ರಾಮಗಳನ್ನಾಗಿ ಬದಲಿಸಲು ಪುಸ್ತಕ ಗೂಡು ಎಂಬ ವಿನೂತನ ಪ್ರಯೋಗವನ್ನು ರಾಜ್ಯದಲ್ಲಿಯೇ ಮೊದಲ ಬಾರಿಗೆ ಹುಮನಾಬಾದ್ ತಾಲೂಕಿನ ೧೯ ಗ್ರಾಪಂಗಳಲ್ಲಿ ಅನುಷ್ಠಾನಗೊಳಿಸಿರುವುದು ಸಂತಸ ತಂದಿದೆ.

| ಡಾ.ಗಿರೀಶ್ ಬದೋಲೆ ಜಿಪಂ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net