

ಸೋಮವಾರಪೇಟೆ : ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ತಾಲೂಕಿನ ಯಡೂಂಡೆ ಗ್ರಾಮದ ನಿವಾಸಿ ಹಾಗೂ ಬಿಜೆಪಿ ಕಾರ್ಯಕರ್ತ ಕಡವಡಿರ ವಿನಯ್ ಸೋಮಯ್ಯ(40) ಅಂತ್ಯಕ್ರಿಯೆ ಅರೆ ಭಾಷಿಕ ಗೌಡ ಜನಾಂಗದ ಸಂಪ್ರದಾಯದಂತೆ ಸ್ವಗ್ರಾಮದಲ್ಲಿ ಶನಿವಾರ ನಡೆಯಿತು.
ಮಧ್ಯಾಹ್ನ 12.30ಕ್ಕೆ ಪಾರ್ಥಿವ ಶರೀರವನ್ನು ವಿನಯ್ ನಿವಾಸಕ್ಕೆ ತರಲಾಯಿತು. ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸುವ ಮೂಲಕ ಕುಟುಂಬಸ್ಥರು ಗೌರವ ಸಲ್ಲಿಸಿದರು. ಮನೆಯೊಳಗೆ ಮೃತದೇಹವನ್ನು ಇರಿಸಿದ ನಂತರ ಅವಳಿ ಸಹೋದರ ವಿವೇಕ್ ಅಂತಿಮ ವಿಧಿವಿಧಾನ ನೆರವೇರಿಸಿದರು. ಮೃತನ ತಾಯಿ ಚಂಡಿರ ದೇವಕ್ಕಿ, ಪತ್ನಿ ಪೂಜೆ ಸಲ್ಲಿಸಿದರು. ಸಂಸದ ಯದುವೀರ್, ಶಾಸಕ ಶ್ರೀವತ್ಸ, ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ, ಬಿಜೆಪಿ ನಾಯಕರಾದ ಬಿ.ಸಿ.ನವೀನ್, ಗೌತಮ್, ಭಾರತೀಶ್ ಮತ್ತಿತರು ಅಂತಿಮ ನಮನ ಸಲ್ಲಿಸಿದರು. ನೂರಾರು ಜನ ಆಗಮಿಸಿ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಿದರು. ವಿನಯ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕಾಫಿತೋಟದಲ್ಲಿ ಚಿತೆಗೆ ಸಹೋದರ ವಿವೇಕ್ ಅಗ್ನಿಸ್ಪರ್ಶ ಮಾಡಿದರು.