ಸ್ವಕ್ಷೇತ್ರದಲ್ಲಿ ನಿಂತು ಗೆದ್ದು ತೋರಿಸಲಿ : ಮಾಜಿ ಸಿಎಂ ಸಿದ್ದರಾಮಯ್ಯಗೆ ಜೆಡಿಎಸ್​ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಸವಾಲು

16-klr-003 jds (1)
Published on

ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತ್ಯತಿತ ಜನತಾದಳವನ್ನು ತೆಗಳುವುದನ್ನೇ ರೂಢಿ ಮಾಡಿಕೊಂಡಿದ್ದು, ಇನ್ನಾದರೂ ಬೇರೆ ಪಕ್ಷದ ಬಗ್ಗೆ ಮಾತನಾಡುವುದನ್ನು ಬಿಟ್ಟು ಅವರ ಹುಳುಕುಗಳನ್ನು ಸರಿಮಾಡಿಕೊಂಡು ಸ್ವಕ್ಷೇತ್ರದಲ್ಲಿ ಸ್ಪರ್ಧಿಸಿ ಶಾಸಕರಾಗಲಿ ಎಂದು ಮಾಜಿ ಶಾಸಕ, ಜೆಡಿಎಸ್​ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಸವಾಲು ಹಾಕಿದರು.

ನಗರದ ಡೂಂಲೈಟ್​ ವೃತ್ತದ ಜೆಡಿಎಸ್​ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಇತ್ತೀಚೆಗೆ ಕೋಲಾರಕ್ಕೆ ಭೇಟಿ ನೀಡಿದ್ದಾಗ, ಜೆಡಿಎಸ್​ ಅನ್ನು ಬಿಜೆಪಿ ಬಿ ಟೀಮ್​ ಎಂದು ತೆಗಳುವುದನ್ನು ಮುಂದುವರಿಸಿದ್ದಾರೆ. ಅವರು ಜಿಲ್ಲೆಯಲ್ಲಿ ಒಡೆದು ಹೋಳಾಗಿರುವ ಕಾಂಗ್ರೆಸ್​ ಅನ್ನು ಸರಿಪಡಿಸಿಕೊಳ್ಳಲು ಯತ್ನಿಸುವುದನ್ನು ಬಿಟ್ಟು ರಾಜಕೀಯವಾಗಿ ಬೆಳೆಸಿದ ಪಕ್ಷವನ್ನು ಟೀಕಿಸಿದ್ದಾರೆ. ಇನ್ನು ಮುಂದಾದರೂ ರಾಜಕೀಯ ಸಿದ್ಧಾಂತ, ಮೌಲ್ಯಗಳಿಗೆ ಬೆಲೆ ಕೊಟ್ಟು ಬೇರೆ ಪಕ್ಷದ ಬಗ್ಗೆ ಅನಗತ್ಯ ಟೀಕೆ ಮಾಡುವುದನ್ನು ನಿಲ್ಲಿಸಬೇಕು ಎಂದರು.

2018ರ ಚುನಾವಣೆ ನಂತರ ನಮ್ಮ ನಾಯಕರ ಮನೆ ಬಾಗಿಲಿಗೆ ಬಂದು ಸರ್ಕಾರ ರಚಿಸುವಂತೆ ಮನವಿ ಮಾಡಿದ್ದವರು ನೀವಲ್ಲವೇ, ಆಗ ನಿಮ್ಮದು ಯಾವ ಟೀಮ್​? ಆಗ ಮಂತ್ರಿ ಮಂಡಲದಲ್ಲಿ ಭಾಗಿಯಾಗಿದ್ದು ತಾವಲ್ಲವೇ? ಎಂದು ಪ್ರಶ್ನಿಸಿದರು.

ಗೆಲ್ಲುವ ಶಕ್ತಿ ನಮಗೂ ಇದೆ: ಸಿದ್ದರಾಮಯ್ಯರನ್ನು ಕೋಲಾರಕ್ಕೆ ಕರೆತರಲು ಶಾಸಕ ಕೆ.ಆರ್​.ರಮೇಶ್​ಕುಮಾರ್​, ಕೆ.ಶ್ರೀನಿವಾಸಗೌಡ ಬಹಳ ಪ್ರಯತ್ನ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ಯಾರೇ ಬಂದರೂ ಸಿದ್ದರಾಮಯ್ಯಗಿಂತ ಹೆಚ್ಚು ಮತ ಗಳಿಸುವಷ್ಟು ಶಕ್ತಿ ನಮಗೂ ಇದೆ. ಶ್ರೀನಿವಾಸಗೌಡರು ಸೇರಿ ಯಾರು ಬೇಕಾದರೂ ಕಾಂಗ್ರೆಸ್​ಗೆ ಹೋಗಲಿ. ನಮಗೇನೂ ಅಭ್ಯಂತರವಿಲ್ಲ. ಈಗಾಗಲೇ ಪಂಚರಾಜ್ಯ ಚುನಾವಣೆ ಫಲಿತಾಂಶದಿಂದ ಪರಿಸ್ಥಿತಿ ಅರ್ಥವಾಗಿದ್ದು, ಮುಂದೆ ಜೆಡಿಎಸ್​ಗೆ ಒಳ್ಳೆಯ ಭವಿಷ್ಯ ಇದೆ ಎಂದು ತಿಳಿಸಿದರು.

ಸ್ವಂತ ಶಕ್ತಿ ಇಲ್ಲದವರು: ತಾಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಮಾತನಾಡಿ, ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲು ಸ್ವಂತ ಶಕ್ತಿ ಇಲ್ಲದ ಕೆಲವರು ಸಿದ್ದರಾಮಯ್ಯ ಕೋಲಾರಕ್ಕೆ ಬರುವಂತೆ ಆಹ್ವಾನ ನೀಡುತ್ತಿದ್ದಾರೆ. ಆ ಮೂಲಕ ತಮ್ಮ ಗೆಲುವಿಗೆ ಸಲೀಸು ಮಾರ್ಗ ಹುಡುಕಿಕೊಂಡು ಹೊರಟಿದ್ದಾರೆಂದು ಲೇವಡಿ ಮಾಡಿದರು. ಜಿಪಂ ಮಾಜಿ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಮಾಜಿ ಸದಸ್ಯ ಕಿತ್ತಂಡೂರು ನಂಜುಂಡಪ್ಪ, ತಾಪಂ ಮಾಜಿ ಸದಸ್ಯ ಗೋಪಾಲಗೌಡ, ನಗರಸಭೆ ಸದಸ್ಯ ವಡಗೂರು ರಾಕೇಶ್​, ಜೆಡಿಎಸ್​ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್​ ಮತ್ತಿತರರಿದ್ದರು.

ಬ್ಲಾಕ್​ಮೇಲ್​ ರಾಜಕಾರಣ: ರಾಷ್ಟ್ರೀಯ ಪಕ್ಷದ ಸಿಎಲ್​ಪಿ ನಾಯಕ ಎನಿಸಿಕೊಂಡಿರುವ ನಿಮ್ಮದು ಇಷ್ಟೆಲ್ಲ ಕಥೆಗಳಿವೆ. ಇನ್ನು ಜೆಡಿಎಸ್​ ಶಾಸಕರಾಗಿ ಮುಂದುವರಿಯುತ್ತಿರುವ ಶ್ರೀನಿವಾಸಗೌಡ ಮನೆಯಲ್ಲಿ ಕುಳಿತು ಅದೇ ಪಕ್ಷದ ವಿರುದ್ಧ ಮಾತನಾಡುತ್ತಾರೆ ಅಂದರೆ ಅವರು ಅವಕಾಶವಾದಿ, ಬ್ಲಾಕ್​ಮೇಲ್​ ರಾಜಕಾರಣ ಮಾಡಿಕೊಂಡು ಬದುಕುತ್ತಿರುವ ವ್ಯಕ್ತಿ ಎಂಬುದು ಅರ್ಥವಾಗುತ್ತದೆ. ಇನ್ನಾದರೂ ಸ್ವಕ್ಷೇತ್ರದಲ್ಲಿ ಸ್ಪರ್ಧಿಸಿ ಶಾಸಕರಾಗಿ, ಇಲ್ಲದಿದ್ದರೆ ಗೌರವಯುತವಾಗಿ ರಾಜಕೀಯ ನಿವೃತ್ತಿ ಪಡೆಯಿರಿ. - ಜಿ.ಕೆ.ವೆಂಕಟಶಿವಾರೆಡ್ಡಿ, ಜೆಡಿಎಸ್​ ಜಿಲ್ಲಾಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net