ಸ್ವ ಉದ್ಯೋಗದ ಮೂಲಕ ಆರ್ಥಿಕ ಅಭಿವೃದ್ಧಿ

18bhr 3 santhe
ಬಾಳೆಹೊನ್ನೂರಿನಲ್ಲಿ ಆಯೋಜಿಸಿದ್ದ ಸಂಜೀವಿನಿ ಮಾಸಿಕ ಸಂತೆಯನ್ನು ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಸದಾಶಿವ ಆಚಾರ್ಯ ಉದ್ಘಾಟಿಸಿದರು. ಮಮತಾ, ರವಿಚಂದ್ರ, ಗಿರೀಶ್, ಕಿಶೋರ್, ಶ್ವೇತಾ ಇದ್ದರು.
Published on

ಬಾಳೆಹೊನ್ನೂರು: ಸಮುದಾಯ ಸಂಸ್ಥೆಗಳ ಮೂಲಕ ಸ್ವ ಉದ್ಯೋಗ ಅವಕಾಶವನ್ನು ಕಲ್ಪಿಸುವುದರಿಂದ ಗ್ರಾಮೀಣ ಜನರ ಜೀವನ ಮಟ್ಟದಲ್ಲಿ ಅಭಿವೃದ್ಧಿ ಹಾಗೂ ಆರ್ಥಿಕ ಸಬಲೀಕರಣ ಸಾಧಿಸಬಹುದು ಎಂದು ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಸದಾಶಿವ ಆಚಾರ್ಯ ಹೇಳಿದರು.

ಪಟ್ಟಣದ ಜೇಸಿ ವೃತ್ತದ ಬಳಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಂಜೀವಿನಿ, ಕರ್ನಾಟಕ ರಾಜ್ಯ ಗ್ರಾಮೀಣ ಸಂವರ್ಧನ ಸಂಸ್ಥೆ ಭಾನುವಾರ ಆಯೋಜಿಸಿದ್ದ ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂಜೀವಿನಿಯಿಂದ ಸ್ವ ಸಹಾಯ ಗುಂಪಿನ ಮಹಿಳೆಯರು ತಯಾರಿಸುವ ವಿವಿಧ ಬಗೆಯ ಉತ್ಪನ್ನಗಳಿಗೆ ಮಾರಾಟಕ್ಕೆ ಅನುವು ಮಾಡಲು ಈ ಸಂತೆ ಏರ್ಪಡಿಸಲಾಗಿದೆ. ಮಹಿಳೆಯರಿಗೆ ಇದರಿಂದ ಆರ್ಥಿಕ ಭದ್ರತೆ ದೊರೆಯಲಿದೆ ಎಂದರು.

ಎನ್.ಆರ್.ಎಲ್.ಎಂನ ತಾಲೂಕು ಘಟಕದ ಸಂಯೋಜಕಿ ಮಮತಾ ಮಾತನಾಡಿ, ಪ್ರತಿ ತಿಂಗಳು ಸಂಜೀವಿನಿ ಸಂತೆ ನಡೆಯಲಿದ್ದು ಪ್ರಸ್ತುತ 15 ಮಳಿಗೆಗಳ ಮೂಲಕ ಮಹಿಳೆಯರು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದ ಬಡ ಮಹಿಳೆಯರಿಗೆ ವ್ಯಾಪಾರದ ಜತೆಗೆ ಪ್ರಚಾರ ದೊರೆಯುವುದರಿಂದ ಬಹಳಷ್ಟು ಅನುಕೂಲವಾಗಲಿದೆ ಎಂದು ನಮ್ಮ ನಿರೀಕ್ಷೆಯಾಗಿದೆ ಎಂದು ಹೇಳಿದರು. ಗ್ರಾಪಂ ಸದಸ್ಯ ರವಿಚಂದ್ರ, ಸಿಬ್ಬಂದಿ ಗಿರೀಶ್, ಕಿಶೋರ್, ಶ್ವೇತಾ, ಶೈನಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net