

ಬೆಂಗಳೂರು: ವಿದ್ಯುತ್ ಬಳಕೆಗೆ ಸಂಬಂಧಿಸಿ ನೈಜ ಸಮಯದಲ್ಲಿ ಮಾಹಿತಿ ಒದಗಿಸುವ ಸ್ಮಾರ್ಟ್ ಮೀಟರ್‌ಗಳಿಗೆ ಭಾರಿ ಮೊತ್ತದ ಹೆಚ್ಚುವರಿ ದರ ನಿಗದಿಪಡಿಸಿರುವುದನ್ನು ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಬೆಸ್ಕಾಂ)ಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಬೆಸ್ಕಾಂ ವ್ಯಾಪ್ತಿಯಲ್ಲಿ ಸ್ಮಾರ್ಟ್ ಮೀಟರ್ ಮಾರಾಟ, ಅಳವಡಿಕೆ ಹಾಗೂ ನಿರ್ವಹಣೆಗೆ ದಾವಣಗೆರೆ ಮೂಲದ ರಾಜಶ್ರೀ ಎಲೆಕ್ಟ್ರಿಕಲ್ಸ್ ಪ್ರೈ. ಲಿ. ಕಂಪನಿಗೆ ನೀಡಿರುವ ಟೆಂಡರ್ ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಅಶ್ವರಾಮಾನುಜಾ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ಆರ್. ಆನವೇರಿ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ವಾದ ಆಲಿಸಿದ ನ್ಯಾಯಪೀಠ ಅರ್ಜಿ ಸಂಬಂಧ ರಾಜ್ಯ ಸರ್ಕಾರ, ಬೆಸ್ಕಾಂ ಹಾಗೂ ಟೆಂಡರ್ ಪಡೆದಿರುವ ರಾಜಶ್ರೀ ಎಲೆಕ್ಟ್ರಿಕಲ್ಸ್ ಪ್ರೈವೇಟ್ ಲಿಮಿಟೆಡ್‌ಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜೂ.17ಕ್ಕೆ ಮುಂದೂಡಿತು.
ಅರ್ಜಿಯಲ್ಲಿ ಏನಿದೆ?:
ಸಿಂಗಲ್ ಫೇಸ್ ಸ್ಮಾರ್ಟ್ ಮೀಟರ್ ನಿಗದಿತ ದರ 2,461 ರೂ. ಹಾಗೂ ತ್ರೀಫೇಸ್ ಸ್ಮಾರ್ಟ್ ಮೀಟರ್ ನಿಗದಿತ ದರ 3,292 ರೂ. ಇದೆ. ಆದರೆ, ಟೆಂಡರ್‌ನಲ್ಲಿ ಕ್ರಮವಾಗಿ 4,235 ರೂ. ಹಾಗೂ 7,525 ರೂ. ದರ ನಮೂದಿಸಲಾಗಿದೆ. ಈ ರೀತಿ ಸಿಂಗಲ್ ಫೇಸ್ ಮೀಟರ್‌ಗೆ ಜನಸಾಮಾನ್ಯರು 1,774 ರೂ. ಮತ್ತು ತ್ರೀಫೇಸ್ ಮೀಟರ್‌ಗೆ 4,233 ರೂ. ಹೆಚ್ಚುವರಿ ಮೊತ್ತ ಪಾವತಿಸಬೇಕಾಗಿದೆ. ಟೆಂಡರ್ ಪ್ರೀಮಿಯಂ ದರ ಶೇ.5ಕ್ಕಿಂತ ಮೀರಬಾರದು ಎಂದು 2022ರಲ್ಲಿ ಸಿಎಂ ಕಚೇರಿ ಟಿಪ್ಪಣಿ ಹೊರಡಿಸಿದೆ. ಆದರೆ, ಈಗಿನ ಟೆಂಡರ್‌ನಲ್ಲಿ ದರ ಶೇ. 72ರಿಂದ ಶೇ.170 ಹೆಚ್ಚಾಗಿದೆ. ಸಾರ್ವಜನಿಕರ ತೆರಿಗೆ ಹಣ ದುಂದು ವೆಚ್ಚವಾಗುತ್ತಿದ್ದು, ಜನಸಾಮಾನ್ಯರಿಗೆ ಹೊರೆಯಾಗುತ್ತಿದೆ. ಆದ್ದರಿಂದ ಟೆಂಡರ್ ರದ್ದುಪಡಿಸಬೇಕು ಎಂದು ಮನವಿ ಮಾಡಲಾಗಿದೆ.