ಸ್ಮತಿ ಭವನ ನಿರ್ಮಾಣಕ್ಕೆ ಖಂಡನೆ

24 Jaggu 15
Published on

ಬೆಳಗಾವಿ: ಗಡಿ ಹೋರಾಟದಲ್ಲಿ ಮೃತಪಟ್ಟ ನಾಡದ್ರೋಹಿ ಎಂಇಎಸ್ ನಾಯಕರನ್ನು ಹುತಾತ್ಮರೆಂದು ಬಿಂಬಿಸಲು ಎಂಇಎಸ್‌ನಿಂದ ಸ್ಮತಿಭವನ ನಿರ್ಮಿಸಲು ಮುಂದಾಗುತ್ತಿರುವುದನ್ನು ವಿರೋಧಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಗುರುವಾರ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಹೊರಟಿದ್ದ ವಾಟಾಳ್ ನಾಗರಾಜ್ ಅವರನ್ನು ವಶಕ್ಕೆ ಪಡೆದಾಗ ನೂಕಾಟ-ತಳ್ಳಾಟ ನಡೆಯಿತು. 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.

ವಾಟಾಳ್ ನಾಗರಾಜ ಮಾತನಾಡಿ, ಸರ್ಕಾರ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಎಂಇಎಸ್ ನಿಷೇಧಿಸುತ್ತೇವೆ ಎಂದು ಹೇಳಿದ್ದರು. ಆದರೆ, ಈವರೆಗೆ ನಿಷೇಧಿಸಿಲ್ಲ. ಈ ಜಿಲ್ಲೆಯ ನಾಯಕರಿಗೂ ನಿಷೇಧ ಮಾಡುವ ಆಸೆ ಇಲ್ಲ. ಎಂಇಎಸ್ ಕನ್ನಡ ನಾಡಿನಲ್ಲಿ ಏಕೆ ಬೇಕು? ಕನ್ನಡಿಗರಿಗೆ ತೊಂದರೆ ಕೊಡಲು ಬೇಕಾ ಎಂದು ಪ್ರಶ್ನಿಸಿ, ಜಿಲ್ಲಾ ರಾಜಕಾರಣಿಗಳು ಸಂಪೂರ್ಣ ಮರಾಠಿ ಎಜೆಂಟ್‌ರಂತೆ ವರ್ತಿಸುತ್ತಿದ್ದು, ಮರಾಠಿ ಗುಲಾಮರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಖಂಡ ಕರ್ನಾಟಕದ ಮೇಲೆ ಪರಭಾಷೆಯವರ ದಾಳಿ ಹೆಚ್ಚಾಗಿದೆ. ಇದನ್ನೆಲ್ಲವನ್ನೂ ಮುಂದಿಟ್ಟುಕೊಂಡು ನಾವು ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಹಾಕಬೇಕು ಎಂದು ತೀರ್ಮಾನ ಮಾಡಿದ್ದು, ಏ.26ರಂದು ರಾಜ್ಯದ ವಿವಿಧ ಬೇಡಿಕೆ ಈಡೇರಿಸುವಂತೆ ರಾಜ್ಯಾದ್ಯಂತ ಈಡುಗಾಯಿ ಒಡೆಯುವ ಚಳವಳಿ ಮಾಡುತ್ತೇವೆ ಎಂದರು. ರಾಜು ಕೋಲಾ, ಶಿವು ದೇವರವರ, ಪ್ರವೀಣ ಚಳವಟಿ, ಚಂದ್ರು ಕರಬಸಣ್ಣವರ, ರಮೇಶ ಚೌಗಲಾ, ಪ್ರಭು ಕಾಕತಿಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net