

ಬೆಂಗಳೂರು : ಹಸು ಮೇಯಿಸುತ್ತಿದ್ದ ಮಹಿಳೆ ಕತ್ತಿನಲ್ಲಿ ಸರ ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಸ್ಥಳೀಯರು ಬೆನ್ನಟ್ಟಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದು, ತೀವ್ರವಾಗಿ ಗಾಯಗೊಂಡ ಆತ ಮೃತಪಟ್ಟಿದ್ದಾನೆ.
ಕುಂಬಳಗೂಡಿನ ರಾಜೇಶ್(35) ಮೃತ ವ್ಯಕ್ತಿ. ಆತನ ಪತ್ನಿ ಕೊಟ್ಟ ದೂರಿನ ಮೇರೆಗೆ ಮಡಿಒಡೆಯರಪಾಳ್ಯದ ವಿಜಯಕುಮಾರ್, ಮೂರ್ತಿ, ಮಹದೇವಯ್ಯ ಮತ್ತು ಅಪ್ಪಿ ಎಂಬುವರನ್ನು ತಾವರೆಕೆರೆ ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಬಲೆಬೀಸಿರುವುದಾಗಿ ರಾಮನಗರ ಜಿಲ್ಲಾ ಎಸ್‌ಪಿ ಎಸ್.ಗಿರೀಶ್ ತಿಳಿಸಿದ್ದಾರೆ.
ಸೆ.29ರ ಸಂಜೆ ಮಾಗಡಿ ರಸ್ತೆಯ ತಾವರೆಕೆರೆ ಸಮೀಪದ ಮಡಿಒಡೆಯರಪಾಳ್ಯ ಮತ್ತು ಕೂಡುಸಿದ್ದಪಾಳ್ಯದ ನಡುವಿನ ರಸ್ತೆಯಲ್ಲಿ ಸುಮಲತಾ ಎಂಬಾಕೆ ಹಸು ಮೇಯಿಸುತ್ತಿದ್ದಾಗ ಬೈಕ್‌ನಲ್ಲಿ ಅಲ್ಲಿಗೆ ಬಂದ ರಾಜೇಶ್, ರಾಮೋಹಳ್ಳಿಗೆ ಹೋಗುವ ದಾರಿ ಯಾವುದು ಎಂದು ಕೇಳಿದ್ದಾನೆ. ಆಕೆ ರಸ್ತೆ ಮಾರ್ಗ ತೋರಿಸುತ್ತಿದ್ದಂತೆ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಅದೇ ದಾರಿಯಲ್ಲಿ ಹಿಂದೆಯೇ ಬಂದ ಬೈಕ್ ಸವಾರನಿಗೆ ಸುಮಲತಾ ವಿಷಯ ತಿಳಿಸಿದ್ದು, ಆತ ವೇಗವಾಗಿ ಹಿಂಬಾಲಿಸಿ ಚಂದ್ರಪ್ಪ ಸರ್ಕಲ್‌ನಲ್ಲಿ ರಾಜೇಶ್‌ನನ್ನು ತಡೆದು ನಿಲ್ಲಿಸಿದ್ದಾನೆ. ಅಷ್ಟೊತ್ತಿಗೆ ರಾಜೇಶ್, ಮಾರ್ಗಮಧ್ಯೆ ಬೈಕ್‌ನಿಂದ ಬಿದ್ದು ಬಾಯಿಗೆ ಗಂಭೀರ ಗಾಯಮಾಡಿಕೊಂಡಿದ್ದ. ಮಹಿಳೆ ಸ್ಥಳಕ್ಕೆ ಹೋಗಿ ಸರಗಳ್ಳನನ್ನು ಗುರುತಿಸಿ ಪೊಲೀಸರನ್ನು ಕರೆಸಿ ಒಪ್ಪಿಸಲಾಗಿದೆ. ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹೆದ್ದಾರಿ ಗಸ್ತು ಪೊಲೀಸರು ರಾಜೇಶ್‌ನನ್ನು ವಶಕ್ಕೆ ಪಡೆದು ತಾವರೆಕೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತ ಮದ್ಯಪಾನ ಮಾಡಿದ್ದರಿಂದ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯವಂತೆ ಅಲ್ಲಿನ ವೈದ್ಯರು ಸಲಹೆ ನೀಡಿದ್ದರು. ಅಲ್ಲಿಂದ ಆಂಬುಲೆನ್ಸ್‌ನಲ್ಲಿ ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಸುನೀಗಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಈ ಸಂಬಂಧ ಮತ್ತೊಂದು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಸ್ಥಳೀಯರು ಸವಾರನ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಪತ್ತೆ ಆಗಿವೆ. ಅದರ ಆಧಾರದ ಮೇಲೆ ನಾಲ್ವರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಎಸ್‌ಪಿ ಗಿರೀಶ್ ಮಾಹಿತಿ ನೀಡಿದ್ದಾರೆ.
ಊರು ಬಿಟ್ಟ ಜನ :
ಸರಗಳವು ಮಾಡಿದ ಬೈಕ್ ಸವಾರ ರಾಜೇಶ್ ಮೃತಪಟ್ಟ ವಿಷಯ ತಿಳಿದ ಮಡಿಒಡೆಯರಪಾಳ್ಯದ ಜನರು ಗ್ರಾಮ ಬಿಟ್ಟು ತಲೆಮರೆಸಿಕೊಂಡಿದ್ದಾರೆ. ರಾಜೇಶ್ ಮೇಲೆ ಹಲ್ಲೆ ನಡೆಸಿರುವ ದೃಶ್ಯವನ್ನು ಸ್ಥಳೀಯರೇ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಅದರ ಆಧಾರದ ಮೇಲೆಯೇ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸರ ಪತ್ತೆ ಆಗಿಲ್ಲ :
ರಾಜೇಶ್ ಸರ ಕದ್ದು ತಪ್ಪಿಸಿಕೊಳ್ಳುತ್ತಿದ್ದಾಗ ಮತ್ತೊಬ್ಬ ಬೈಕ್ ಸವಾರ ಬೆನ್ನಟ್ಟಿ ಹಿಡಿದುಕೊಂಡ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆದರೆ, ರಾಜೇಶ್ ಬಳಿ ಚಿನ್ನದ ಸರ ಪತ್ತೆ ಆಗಿಲ್ಲ. ಕುಂಬಳಗೂಡಿನಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ರಾಜೇಶ್ ವಿರುದ್ಧ ಈ ಹಿಂದೆ ಯಾವುದೇ ಅಪರಾಧ ಪ್ರಕರಣಗಳು ದಾಖಲಾಗಿಲ್ಲ.