ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಕೋಲಾರ ಜಿಲ್ಲೆಗೆ ಎರಡು ಕಣ್ಣುಗಳಿಂತಿರುವ ಕೊಮುಲ್ ಮತ್ತು ಡಿಸಿಸಿ ಬ್ಯಾಂಕ್ ಚುನಾವಣೆಗೆ ದಿನಾಂಕಗಳು ನಿಗದಿಯಾಗಿದ್ದು ಎರಡೂ ಸಹಕಾರಿ ಸಂಸ್ಥೆಗಳ ಮೇಲೆ ರಾಜಕಾರಣಿಗಳ ವಕ್ರದೃಷ್ಟಿ ಬಿದ್ದಿದೆ. ಈ ಸಹಕಾರಿ ಸಂಸ್ಥೆಗಳ ಚುನಾವಣೆಗಳು ಸಾರ್ವತ್ರಿಕ ಚುನಾವಣೆಗಳನ್ನೂ ಮೀರಿಸುವಂತಿದ್ದ ಶಾಸಕರುಗಳೆ ಈ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವುದರಿAದ ಜಿದ್ದಾಜಿದ್ದಿ ಮತ್ತು ಪ್ರತಿಷ್ಠೆಯನ್ನು ಪಡೆದುಕೊಂಡಿದೆ.
ಪಕ್ಷಾತೀತವಾಗಿ ನಡೆಯಬೇಕಾಗಿದ್ದಂತಹ ಸಹಕಾರಿ ಚುನಾವಣೆಗಳಿಗೆ ರಾಜಕಾರಣಿಗಳು ಪ್ರವೇಶ ಮಾಡುತ್ತಿರುವುದರಿಂದ ಶಾಸಕರುಗಳ ಅನುಯಾಯಿಗಳು ಮತ್ತು ಮುಖಂಡರುಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ, ಇದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಮುಂದುವರೆದಿದ್ದು ಇತರೆ ಪಕ್ಷಗಳು ಇದನ್ನೇ ಅಸ್ತ್ರವನ್ನಾಗಿಸಿಕೊಂಡು ಶಾಸಕಾಂಗದ ಜೊತೆಗೆ ಸ್ಥಳೀಯ ಸಂಸ್ಥೆಗಳಲ್ಲಿಯೂ ಸ್ಥಾನಮಾನ ಗಳಿಸಲು ಮುಂದಾಗುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸುವಂತಾಗಿದೆ.
ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಚುನಾವಣೆ ನಡೆದಿದ್ದರೆ ಎಲ್ಲಾ ಪಕ್ಷಗಳ ಮುಖಂಡರುಗಳಿಗೆ ಮತ್ತು ಶಾಸಕರ ಅನುಯಾಯಿಗಳಿಗೆ ಸ್ಥಾನ ಮಾನ ಸಿಗುತ್ತಿತ್ತು ಆದರೆ ಜಿ.ಪಂ ಮತ್ತು ತಾ.ಪಂ ಚುನಾವಣೆ ನಡೆಯದ ಕಾರಣ ಮುಖಂಡರು ಸಹಕಾರಿ ಚುನಾವಣೆಗಳ ಮೇಲೆ ಕಣ್ಣಿಟ್ಟಿದ್ದರು ಅದಕ್ಕೂ ಶಾಸಕರುಗಳು ಅಡ್ಡಿಪಡಿಸುತ್ತಿದ್ದಾರೆಂಬ ಆರೊಪ ಬಲವಾಗಿ ಕೇಳಿ ಬರುತ್ತಿದೆ.
ಮುಂದುವರೆದ ಕಾಂಗ್ರೆಸ್ ಬಣ ರಾಜಕೀಯ:
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಬಣ ರಾಜಕೀಯ ಕೋಲಾರದಲ್ಲಿ ಮುಂದುವರೆದಿದೆ, ಡಿಸಿಸಿ ಬ್ಯಾಂಕ್ ಚುನಾವಣೆಗೆ ನಾಮಪತ್ರ ಪ್ರಕ್ರಿಯೆ ಪ್ರಾರಂಭಗೊAಡಿದ್ದು ಭಾನುವಾರ ಕೆ.ಜಿಎಫ್ ಶಾಸಕಿ ರೂಪಕಲಾ ಮತ್ತು ಬ್ಯಾಲಹಳ್ಳಿ ಗೋವಿಂದೇಗೌಡರು ನಾಮಪತ್ರ ಸಲ್ಲಿಸಿರುವುದೇ ಸಾಕ್ಷಿಯಾಗಿದೆ.
ಈ ಇಬ್ಬರೂ ಕಾಂಗ್ರೆಸ್ ನಲ್ಲಿಯೇ ಗುರ್ತಿಸಿಕೊಂಡಿದ್ದಾರಾದರೂ ಇತರೆ ತಾಲ್ಲೂಕುಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಲು ಅಭ್ಯರ್ಥಿಗಳ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ಸೋಮವಾರ ಆಯಾ ತಾಲ್ಲೂಕುಗಳ ಶಾಸಕರ ಹಾಗು ಮಾಜಿ ಶಾಸಕರ ಮತ್ತು ಮುಖಂಡರ ಸಮ್ಮುಖದಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ. ಆದರೆ ಕೆಜಿಎಫ್ ಶಾಸಕಿ ಮತ್ತು ಮಾಜಿ ಅಧ್ಯಕ್ಷ ಗೋವಿಂದೇಗೌಡರು ಮಾತ್ರ ನಾಮಪತ್ರ ಭಾನುವಾರವೇ ಸಲ್ಲಿಸಿರುವುದರಿಂದ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸ್ವಷ್ಟವಾಗಿದೆ.
ಕಳೆದ ಒಂದು ದಶಕದಿಂದಲೂ ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ಮುಂದುವರೆಯುತ್ತಲೇ ಬಂದಿದ್ದು ಇದನ್ನು ಶಮನಗೊಳಿಸಲು ಹೈಕಮಾಂಡ್ ಅನೇಕ ಭಾರಿ ಪ್ರಯತ್ನ ಪಟ್ಟರೂ ಫಲಿಸಲಿಲ್ಲ. ಆದರೆ ಘಟಾನುಘಟಿ ನಾಯಕರನ್ನು ಸೋಲಿಸುವ ಮಟ್ಟಕ್ಕೂ ಬಣ ರಾಜಕೀಯ ಮುಂದಾಗಿ ಇದರಿಂದ ಸೋಲನ್ನು ಅನುಭವಿಸಿದಂತಾಗಿದೆ, ರಾಜ್ಯ ಮತ್ತು ರಾಷ್ಟ್ರ ನಾಯಕರುಗಳಿಗೆ ಕೋಲಾರದ ಸಹವಾಸವೇ ಬೇಡ ಎನ್ನುವಷ್ಟರ ಮಟ್ಟಿಗೆ ಆಗಿದೆ. ರಾಜಕಾರಣದಲ್ಲಿ ಮೇದಾವಿಗಳೆನೆಸಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ಕೆ.ಹೆಚ್ ಮುನಿಯಪ್ಪನವರ ಒಳಪ್ರತಿಷ್ಟೆಗಳೇ ಇದಕ್ಕೆ ಕಾರಣ ಎಂಬುವAತಾಗಿದ್ದು ಸದ್ಯದ ಪರಿಸ್ಥಿತಿಯಲ್ಲಿಯೂ ಕೋಲಾರ ಜಿಲ್ಲೆಯ ಬಣ ರಾಜಕಾರಣ ಮುಂದುವರೆದಿದೆ.
ಸ್ಥಳೀಯ ಸಂಸ್ಥೆಗಳಾದ ಡಿಸಿಸಿ ಬ್ಯಾಂಕ್ ಮತ್ತು ಕೋಚಿಮುಲ್ ಚುನಾವಣೆಗಳಲ್ಲಿಯೂ ಬಣ ರಾಜಕಾರಣ ಮುಂದುವರೆದಿದೆ. ಇದಕ್ಕೆ ಸಾಕ್ಷಿ ಎಂಬAತೆ ಕಳೆದ ವಾರ ಆಹಾರ ಮತ್ತು ನಾಗರೀಕ ಇಲಾಖೆಗಳ ಸಚಿವ ಕೆ.ಹೆಚ್ ಮುನಿಯಪ್ಪ ಕೋಲಾರದ ತಮ್ಮ ನಿವಾಸಲದಲ್ಲಿ ಪೂಜೆ ಸಲ್ಲಿಸಿದ ವೇಳೆಯಲ್ಲಿ ಇನ್ನು ಮುಂದೆ ಪ್ರತಿ ೧೫ ದಿನಗಳಿಗೊಮ್ಮೆ ಜಿಲ್ಲೆಗೆ ಭೇಟಿ ನೀಡುತ್ತೇನೆ ಎಂದು ಕೆ.ಹೆಚ್ ಮುನಿಯಪ್ಪ ಬೆಂಬಲಿಗರಿಗೆ ಧೈರ್ಯ ತುಂಬಿ ಹೋಗಿರುವುದು ಮತ್ತಷ್ಟು ಬಣ ರಾಜಕೀಯ ಮುಂದುವರೆಯಲು ಪುಷ್ಟಿ ನೀಡಿದಂತೆ ಆಗಿದೆ.
ಈ ಹಿಂದೆ ಕೆ.ಹೆಚ್ ಮುನಿಯಪ್ಪನವರ ವಿರುದ್ದ ಸೃಷ್ಟಿಯಾಗಿದ್ದ ಘಟಬಂಧನ್ ನಿಂದ ಹೊರಬಂದಿರುವ ಬಂಗಾರಪೇಟೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಇತ್ತೀಚೆಗೆ ಕೆ.ಹೆಚ್ ಮುನಿಯಪ್ಪರೊಂದಿಗೆ ಗುರ್ತಿಸಿಕೊಂಡಿದ್ದು ಘಟಬಂಧನ್ ಶಾಸಕರಾದ ಕೆ.ವೈ ನಂಜೇಗೌಡ, ಕೊತ್ತೂರು ಮಂಜುನಾಥ್, ಎಮ ಎಲ್ ಸಿ ಅನಿಲ್ ಕುಮಾರ್ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್ ವಿರುದ್ದವೂ ಬುಸುಗುಟ್ಟುತ್ತಿದ್ದಾರೆ. ಇದು ಮತ್ತೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಕಾಂಗ್ರೆಸ್ ನಲ್ಲಿ ಎರಡು ಗುಂಪುಗಳಾಗುವ ಸಾಧ್ಯತೆಯಿದ್ದು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಇದರ ಲಾಭ ಪಡೆಯುವ ಸಾಧ್ಯತೆಗಳಿವೆ.
ಚಿತ್ರ ೧೯ ಕೆ.ಎಲ್.ಆರ್. ೦೧ : ಡಿ.ಸಿ.ಸಿ.ಬ್ಯಾಂಕ್ ಚಿತ್ರ ಸಂಗ್ರಹ ಚಿತ್ರ
ಚಿತ್ರ ೧೯ ಕೆ.ಎಲ್.ಆರ್. ೦೧ಎ : ಕೋಮುಲ್ ಕಛೇರಿ ಚಿತ್ರ ಸಂಗ್ರಹ ಚಿತ್ರ