ಪಾಂಡವಪುರ: ಸರ್ಕಾರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಎರಡನೇ ಅವಧಿಗೆ ಮೀಸಲಾತಿ ನಿಗದಿಗೊಳಿಸದ ಪರಿಣಾಮ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿವೆ. ಶೀಘ್ರ ಮೀಸಲಾತಿ ಪ್ರಕಟಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಪುರಸಭೆ ಸದಸ್ಯ ಚಂದ್ರು ಹೇಳಿದರು.
ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಮುಕ್ತಾಯಗೊಂಡು ಐದು ತಿಂಗಳಾದರೂ ಸರ್ಕಾರ ಮೀಸಲಾತಿ ನಿಗದಿ ಪ್ರಕಟಿಸಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗುತ್ತಿಲ್ಲ. ಸರ್ಕಾರ ತಕ್ಷಣ ಮೀಸಲಾತಿ ನಿಗದಿಪಡಿಸಬೇಕು. ಈಗಾಗಲೇ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರ ಎರಡೂವರೆ ವರ್ಷಗಳ ಅವಧಿ ಮುಕ್ತಾಯಗೊಂಡಿದ್ದು, ಐದು ತಿಂಗಳು ಹೆಚ್ಚುವರಿಯಾಗಿದೆ. ಇನ್ನು ಎರಡು ವರ್ಷಗಳ ಅವಧಿ ಮಾತ್ರ ಉಳಿದಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಪುರಸಭೆ ಸದಸ್ಯ ಆರ್.ಸೋಮಶೇಖರ್ ಮಾತನಾಡಿ, ಉಪವಿಭಾಗಾಧಿಕಾರಿಯನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಉಪವಿಭಾಗಾಧಿಕಾರಿಗೆ ನಾಲ್ಕು ತಾಲೂಕುಗಳ ಉಸ್ತುವಾರಿ ನೀಡಲಾಗಿದೆ. ಪ್ರತಿಯೊಂದು ಕೆಲಸಕ್ಕೂ ಅಲೆದಾಡಬೇಕಿದೆ. ಶೀಘ್ರ ಮೀಸಲಾತಿ ಪ್ರಕಟಿಸದಿದ್ದರೆ ಎಲ್ಲ ತಾಲೂಕುಗಳ ಪುರಸಭೆ ಸದಸ್ಯರೊಂದಿಗೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಲಾಗುವುದು ಎಂದು ಎಚ್ಚರಿಸಿದರು.