

ಎಚ್.ಡಿ.ಕೋಟೆ: ತಾಲೂಕಿನ ಪಡುಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂದಿರಾನಗರ ಗ್ರಾಮದಲ್ಲಿ ಮುಖ್ಯ ರಸ್ತೆಯಲ್ಲಿರುವ ಸಂತೋಷ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ.
ಗ್ರಾಮಸ್ಥರ ವಿರೋಧ ಹೆಚ್ಚುತ್ತಿದೆಯಾದರೂ ಮದ್ಯದಂಗಡಿ ತೆರವು ಮಾಡಲು ಆಗದಿರುವ ಹಿನ್ನೆಲೆಯಲ್ಲಿ ಎಲ್ಲೆಂದರಲ್ಲಿ ಕುಡಿದು ಮಲಗುವರ ಸಂಖ್ಯೆ ಹೆಚ್ಚುತ್ತಿದೆ. ಪರಿಣಾಮ ಮಹಿಳೆಯರು, ಮಕ್ಕಳು ತೊಂದರೆ ಅನುಭವಿಸುವಂತಾಗಿದೆ. ಇಷ್ಟಾದರೂ ಕೂಡ ಅಬಕಾರಿ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಬೇರೆ ಕಡೆ ಇದ್ದ ಮಧ್ಯದ ಅಂಗಡಿಯನ್ನು ಮೂರು ವರ್ಷಗಳ ಹಿಂದೆ ಇಲ್ಲಿಗೆ ಸ್ಥಳಾಂತರ ಮಾಡಲಾಯಿತು. ಅಲ್ಲಿಂದ ಈವರೆಗೂ ಗ್ರಾಮಸ್ಥರು ಮದ್ಯದಂಗಡಿಯನ್ನು ಬೇರೆಡೆಗೆ ಸ್ಥಳಾಂತರ ಮಾಡುವಂತೆ ಒತ್ತಾಯಿಸುತ್ತಿದ್ದರೂ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಂಡಿಲ್ಲ. ಬದಲಾಗಿ ಅಬಕಾರಿ ಕಾನೂನು ಪ್ರಕಾರ ಮದ್ಯದಂಗಡಿ ತೆರೆದಿರುವುದು ಸರಿ ಇದೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಪಡುಕೋಟೆ ಪಂಚಾಯತಿ ವ್ಯಾಪ್ತಿಯ ಜಿ.ಜಿ ಕಾಲೋನಿ, ಗೂಳಿಕಟ್ಟೆ, ಬೋವಿ ಕಾಲನಿ, ಶರೀಫ್ ಕಾಲನಿ, ಮಂಟಿ ಹಾಡಿ, ಇಂದಿರನಗರ, ಹರಳಿಕಟ್ಟೆ ಹಾಡಿ, ಮುರುಗನಹಳ್ಳಿ, ದೇವರಾಜ ನಗರ, ಕಾಡಹಂಪಾಪುರ, ಭಾರತಿ ಪುರ, ಗಾಂಧಿನಗರ ಬರಲಿದ್ದು, ಬಹುತೇಕರು ಆದಿವಾಸಿಗಳು, ಹಿಂದುಳಿದ ವರ್ಗ, ಕೂಲಿ ಕಾರ್ಮಿಕರು ಇಲ್ಲಿ ಹೆಚ್ಚು ವಾಸ ಮಾಡುತ್ತಿದ್ದಾರೆ. ನಿತ್ಯ ದುಡಿದು ತಂದ ಹಣವನ್ನು ಕುಡಿಯಲು ವಿನಿಯೋಗ ಮಾಡುತ್ತಿದ್ದು, ದುಡಿದ ಹಣದಲ್ಲಿ ಜೀವನ ಮಾಡಬೇಕಾದ ಕುಟುಂಬ ಉಪವಾಸದಲ್ಲಿ ಕಾಲ ಕಳೆಯುವಂತಾಗಿದೆ.
ಈ ನಡುವೆ ಮಿತಿ ಮೀರಿ ಮದ್ಯ ಸೇವನೆ ಮಾಡುವುದರಿಂದ ಕುಡುಕರು ಪ್ರಜ್ಞೆ ಇಲ್ಲದೆ ಎಲ್ಲೆಂದರಲ್ಲಿ ದಾರಿ ಮಧ್ಯೆ ಪರಿಜ್ಞಾನ ಇಲ್ಲದೆ ಬೀಳುತ್ತಿದ್ದಾರೆ. ರಸ್ತೆ ಅಕ್ಕಪಕ್ಕದಲ್ಲಿ ವಾಸದ ಮನೆಗಳು ಇದ್ದು ಮಹಿಳೆಯರು ಮತ್ತು ಮಕ್ಕಳು ಹೊರಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಬಸ್ ನಿಲ್ದಾಣದ ಪಕ್ಕದಲ್ಲಿ ಮದ್ಯದ ಅಂಗಡಿ ಇದ್ದು ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳೂ ಕಿರಿಕಿರಿ ಅನುಭವಿಸುವಂತಾಗಿದೆ. ಗ್ರಾಮದ ರಸ್ತೆ ಕಿರಿದಾಗಿರುವ ಹಿನ್ನೆಲೆಯಲ್ಲಿ ಮದ್ಯ ಸೇವನೆ ಮಾಡಿದ ಬಳಿಕ ರಸ್ತೆ ಮಧ್ಯದಲ್ಲಿ ನಿಂತು ಹರಟೆ ಹೊಡೆಯುತ್ತ ನಿಲ್ಲುವುದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಕೆಲವು ಸಂದರ್ಭಗಳಲ್ಲಿ ವಾಹನಗಳು ಕುಡಕರ ಮೇಲೆ ನುಗ್ಗಿ ಅಪಘಾತ ನಡೆದು ಗಂಭೀರ ಗಾಯಗಳಾಗಿರುವ ಘಟನೆ ಕೂಡ ನಡೆದಿದೆ.
ಬಾರ್ ಸ್ಥಳಾಂತರ ಮಾಡುವಂತೆ ಸುತ್ತಮುತ್ತಲಿನ ಗ್ರಾಮಸ್ಥರ ಜತೆಗೂಡಿ ಇಂದಿರನಗರ ವಾಸಿಗಳು ಹಲವು ಸಂದರ್ಭದಲ್ಲಿ ಗ್ರಾಮ ಪಂಚಾಯತಿ, ತಾಲೂಕು ಆಡಳಿತ ಸೇರಿದಂತೆ ವಿವಿಧೆಡೆ ಪ್ರತಿಭಟನೆ ಮಾಡಿದರೂ ಪ್ರಯೋಜನವಾಗಿಲ್ಲ. ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿ ಸಭೆ ನಡೆಸಿ ಬಾರ್ ಸ್ಥಳಾಂತರ ಮಾಡುವ ಬಗ್ಗೆ ನಿರ್ಣಯ ಮಾಡಿದ್ದರೂ ಬಾರ್ ಮಾಲೀಕ ಆರೇಳು ತಿಂಗಳಿಂದ ಆರೋಗ್ಯದ ಸಮಸ್ಯೆ ನೆಪವೊಡ್ಡಿ ಮುಂದಕ್ಕೆ ಹಾಕುತ್ತಿರುವ ಬಗ್ಗೆ ಸ್ಥಳೀಯರಲ್ಲಿ ಅಸಮಾಧಾನ ಹೆಚ್ಚಿಸಿದೆ.
ಮದ್ಯದಂಗಡಿ ಅನತಿ ದೂರದಲ್ಲಿ ಶಾಲೆ, ದೇವಸ್ಥಾನ, ಸೇರಿದಂತೆ ವಿವಿಧ ಧರ್ಮಗಳ ಧಾರ್ಮಿಕ ಸ್ಥಳ ಇದ್ದರೂ ಗ್ರಾಮ ಪಂಚಾಯತಿ ಬಾರ್ ತೆರೆಯಲು ಲೈಸೆನ್ಸ್ ನೀಡಿರುವುದು ಅನುಮಾನಕ್ಕೆ ಎಡೆಮಾಡಿಕೊಡುತ್ತದೆ. ಅಂಗಡಿ ತೆರೆಯಲು ಸಮಯ ನಿಗದಿ ಮಾಡಿದ್ದರೂ ನಿತ್ಯ ಬೆಳಗ್ಗೆ 6ರಿಂದ ರಾತ್ರಿ 11 ಗಂಟೆವರೆಗೆ ಅಂಗಡಿ ತೆರೆದಿರುತ್ತದೆ. ಆ ಮೂಲಕ ಮಾಲೀಕ ನಿಯಮವನ್ನು ಗಾಳಿಗೆ ತೂರುತ್ತಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅಬಕಾರಿ ಆದೇಶವನ್ನು ಉಲ್ಲಂಘನೆ ಮಾಡುತ್ತಿದ್ದರೂ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು ಕಂಡುಬಂದಾಗ ಅದನ್ನು ಸರಿಪಡಿಸಬೇಕಾದ್ದು ಅಧಿಕಾರಿಗಳ ಕರ್ತವ್ಯ. ಈ ವಿಚಾರದಲ್ಲಿ ಅಧಿಕಾರ ವರ್ಗ ಏನು ಕ್ರಮ ವಹಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಗಾಂಧಿನಗರ ಗ್ರಾಮದಲ್ಲಿರುವ ಸಂತೋಷ್ ಬಾರ್ ಅನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಈ ಸಂಬಂಧ ಅಂಗಡಿ ಮಾಲೀಕರಿಗೆ ಸೂಚಿಸಲಾಗಿದೆ. ಅವರೂ ಕೂಡ ಸ್ಥಳಾಂತರ ಮಾಡಲು ಜಾಗ ಗುರುತು ಮಾಡಿದ್ದಾರೆ. ಆದರೆ ಅವರಿಗೆ ಅನಾರೋಗ್ಯ ಸಮಸ್ಯೆಯಿಂದ ಸ್ಥಳಾಂತರ ಮಾಡಲು ವಿಳಂಬ ಆಗಿದೆ. 2024 ರ ಜನವರಿಯಲ್ಲಿ ಸ್ಥಳಾಂತರ ಮಾಡುವುದಾಗಿ ಒಪ್ಪಿಕೊಂಡಿದ್ದು ಅದರಂತೆ ನಡೆದುಕೊಳ್ಳಲು ಮತ್ತೊಮ್ಮೆ ಸೂಚನೆ ನೀಡಲಾಗುವುದು.
ಯು.ವಿ.ಗೀತಾ ಅಬಕಾರಿ ನಿರೀಕ್ಷಕರು ಎಚ್.ಡಿ.ಕೋಟೆ
ಪಡುಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹೆಚ್ಚು ಆದಿವಾಸಿ ಜನರು ವಾಸ ಮಾಡುತ್ತಿದ್ದು ದುಡಿದ ಹಣವನ್ನು ಕುಡಿತಕ್ಕೆ ಬಳಸಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಗ್ರಾಮದ ಮದ್ಯದಲ್ಲಿ ಬಾರ್ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಹೆಣ್ಣುಮಕ್ಕಳು ರಸ್ತೆಯಲ್ಲಿ ತಿರುಗಾಡಲು ಮುಜುಗರ ಪಡುವಂತಾಗಿದೆ. ಬಾರ್ ಸ್ಥಳಾಂತರ ಮಾಡುವಂತೆ ಹಲವಾರು ಬಾರಿ ಪ್ರತಿಭಟನೆ ಮಾಡಿ ದೂರು ನೀಡಿದ್ದರೂ ಅಬಕಾರಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ.
ರವಿ ಜಿಜಿ ಕಾಲನಿ ನಿವಾಸಿ ಪಡುಕೋಟೆ ಗ್ರಾಪಂ