

ಚಿತ್ರದುರ್ಗ: ರಾಜ್ಯದ ನಂ.1 ದಿನಪತ್ರಿಕೆ ‘ವಿಜಯವಾಣಿ’ ಸಾರಥ್ಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜೂ. 11ರಂದು ಬೆಳಗ್ಗೆ 11ಕ್ಕೆ ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ ‘ಮಕ್ಕಳಿಗೆ ಸ್ಥಳದಲ್ಲೇ ಚಿತ್ರ ಬಿಡಿಸುವ ಜಿಲ್ಲಾಮಟ್ಟದ ಸ್ಪರ್ಧೆ’ ಹಮ್ಮಿಕೊಳ್ಳಲಾಗಿದೆ.
ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮತ್ತು ಕಾಳಜಿ ಬೆಳೆಸುವ ಉದ್ದೇಶದೊಂದಿಗೆ ಅರಣ್ಯ ಇಲಾಖೆ ಸಹಯೋಗ ಹಾಗೂ ವಿದ್ಯಾವಿಕಾಸ ವಿದ್ಯಾಸಂಸ್ಥೆಯ ಸಹಕಾರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. 5ರಿಂದ 10ನೇ ತರಗತಿಯ 11ರಿಂದ 16 ವರ್ಷದೊಳಗಿನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ.
ನೋಂದಣಿ ಉಚಿತ: ವಿಭಾಗ 1ರಲ್ಲಿ ಪಟ್ಟಣ ಮತ್ತು ಪಾರ್ಕ್, ವಿಭಾಗ 2ರಲ್ಲಿ ನನ್ನ ಕನಸಿನ ಭೂಮಿ ಸ್ಪರ್ಧಾ ವಿಷಯಗಳಾಗಿವೆ. 5, 6 ಮತ್ತು 7ನೇ ತರಗತಿ ಜೂನಿಯರ್, 8ರಿಂದ 10ನೇ ತರಗತಿ ಸೀನಿಯರ್ ಸೇರಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಭಾಗದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಪ್ರವೇಶಾತಿ ಸಂಪೂರ್ಣ ಉಚಿತವಾಗಿದೆ.
ವಿಶೇಷ ಸೂಚನೆ: ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಎಲ್ಲ ಮಕ್ಕಳಿಗೂ ಡ್ರಾಯಿಂಗ್ ಶೀಟ್ ಕೊಡಲಾಗುವುದು. ಆದರೆ, ಪ್ಯಾಡು, ಪೆನ್ಸಿಲ್, ಸ್ಕೆಚ್ ಪೆನ್, ಸ್ಕೇಲು ಸೇರಿ ಇತರ ಬರವಣಿಗೆ ಸಾಮಗ್ರಿಗಳನ್ನು ಮಕ್ಕಳೇ ತರಬೇಕು. ಕೊಟ್ಟಿರುವ ಸ್ಪರ್ಧಾ ವಿಷಯ ಬಿಟ್ಟು ಬೇರೆ ಯಾವ ಚಿತ್ರವನ್ನೂ ಬರೆಯುವಂತಿಲ್ಲ. ಚಿತ್ರವನ್ನು ಪೂರ್ಣ ಪ್ರಮಾಣದಲ್ಲಿ ಬಿಡಿಸಬೇಕು.
ಚಿತ್ರ ಬಿಡಿಸಲು 5ರಿಂದ 7ನೇ ತರಗತಿ ವಿದ್ಯಾರ್ಥಿಗಳು ವಾಟರ್ ಕಲರ್, ಮಿಕ್ಸ್ ಮಿಡಿಯಾ, ಸ್ಕೆಚ್ ಪೆನ್, ಪೆನ್ಸಿಲ್, ಕಲರ್ ಪೆನ್ಸಿಲ್ ಈ ಪೈಕಿ ಯಾವುದಾದರೂ, 8ರಿಂದ 10ನೇ ತರಗತಿ ವಿದ್ಯಾರ್ಥಿಗಳು ವಾಟರ್ ಕಲರ್, ಪೋಶೋ ಕಲರ್ ಮಾತ್ರ ಬಳಸಲು ಅವಕಾಶ ಕಲ್ಪಿಸಲಾಗಿದೆ.
ಬಹುಮಾನ ಏನು? ಎರಡು ವಿಭಾಗದ ಮಕ್ಕಳಿಗೆ ಪ್ರತ್ಯೇಕವಾಗಿ ನಗದು ಬಹುಮಾನ ವಿತರಿಸಲಾಗುವುದು. ಪ್ರಥಮ 2ಸಾವಿರ ರೂ., ದ್ವಿತೀಯ 1.5ಸಾವಿರ ರೂ., ತೃತೀಯ 1ಸಾವಿರ ರೂ., ತಲಾ ಐವರಿಗೆ ಸಮಾಧಾನಕರ ಬಹುಮಾನ ಇರಲಿದೆ. ಹೆಚ್ಚಿನ ಮಾಹಿತಿಗೆ ಆಸಕ್ತರು ಮೊಬೈಲ್ 8884432545 ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾಯಿಸಲು ಅವಕಾಶವಿದೆ.
ಗುರುತಿನ ಚೀಟಿ, ಫೋಟೋ ಕಡ್ಡಾಯ: ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ಮಕ್ಕಳು ತಾವು ಓದುತ್ತಿರುವ ಶಾಲೆಯ ಐಡಿ ಕಾರ್ಡ್ ಅಥವಾ ಅಧಿಕೃತ ಗುರುತಿನ ಚೀಟಿ ಹಾಗೂ ಎರಡು ಪಾಸ್‌ಪೋರ್ಟ್ ಫೋಟೋ ಕಡ್ಡಾಯವಾಗಿ ತರಬೇಕು. ಜೂ. 11ರಂದು ಬೆಳಗ್ಗೆ 9ರಿಂದ 11ರೊಳಗೆ ಸ್ಥಳದಲ್ಲೂ ಹೆಸರು ನೋಂದಣಿಗೆ ಅವಕಾಶ ಇದೆ.
ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್‌ಕುಮಾರ್ ಮೀನಾ ಅವರು ಸ್ಪರ್ಧೆ ಉದ್ಘಾಟಿಸುವರು. ಡಿಸಿಎಫ್ ಟಿ.ರಾಜಣ್ಣ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ವಿದ್ಯಾವಿಕಾಸ ವಿದ್ಯಾಸಂಸ್ಥೆ ಅಧ್ಯಕ್ಷ ವಿಜಯಕುಮಾರ್ ಅಧ್ಯಕ್ಷತೆ ವಹಿಸುವರು. ವಿಜಯವಾಣಿ ಚಿತ್ರದುರ್ಗ ಬ್ಯೂರೋ ಮುಖ್ಯಸ್ಥ ಎಂ.ಬಿ.ನವೀನ್, ಚಿತ್ರ ಕಲಾವಿದ ಕ್ರಿಯೇಟಿವ್ ವೀರೇಶ್ ಉಪಸ್ಥಿತರಿರುವರು.