ಸ್ಥಳ ನೀಡಿದಲ್ಲಿ ಆರ್‌ಟಿಒ ಕಚೇರಿಗೆ ಅನುದಾನ

24 TKE 1B
ತರೀಕೆರೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಅಭಿವೃದ್ಧಿ ಕಾಮಗಾರಿಗೆ ಸಚಿವ ರಾಮಲಿಂಗಾರೆಡ್ಡಿ ಶಂಕುಸ್ಥಾಪನೆ ನೆರವೇರಿಸಿದರು. ಜಿ.ಎಚ್.ಶ್ರೀನಿವಾಸ್, ಇಬ್ರಾಹಿಂ ಮೈಗೂರ, ವಸಂತ್‌ಕುಮಾರ್, ಪಾರ್ವತಮ್ಮ, ಜಯಣ್ಣ ಇತರರಿದ್ದರು.
Published on

ತರೀಕೆರೆ: ಪಟ್ಟಣದಲ್ಲಿ ಆರ್‌ಟಿಒ ಕಚೇರಿ ಸ್ಥಾಪನೆಗೆ ಜಾಗದ ವ್ಯವಸ್ಥೆ ಮಾಡಿಕೊಟ್ಟರೆ ಅಗತ್ಯ ಅನುದಾನ ಒದಗಿಸಿ ಕಟ್ಟಡ ನಿರ್ಮಿಸಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು.

ಪಟ್ಟಣದ 2.16 ಎಕರೆ ಪ್ರದೇಶದಲ್ಲಿ 9.15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ತಾಲೂಕಿನ ಬಹುತೇಕ ಕಡೆ ಖಾಸಗಿ ಬಸ್ ಸಂಚಾರವೇ ಇರುವುದರಿಂದ ಮಹಿಳೆಯರಿಗೆ ಶಕ್ತಿ ಯೋಜನೆಯ ಪ್ರಯೋಜನವಿಲ್ಲದಂತಾಗಿದೆ. ಸರ್ಕಾರದ ಮಟ್ಟದಲ್ಲಿ 2 ಸಾವಿರ ಹೊಸ ಬಸ್ ಖರೀದಿ ಪ್ರಕ್ರಿಯೆ ನಡೆಯುತ್ತಿದ್ದು ಖರೀದಿಯಾದ ಕೂಡಲೇ ಗ್ರಾಮೀಣ ಪ್ರದೇಶಗಳ ಸಂಚಾರಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಮುಕ್ತಗೊಳಿಸಲಾಗುವುದು ಎಂದರು.

ತರೀಕೆರೆಯಲ್ಲಿ ಹೊಸ ಬಸ್ ಡಿಪೋ ಸ್ಥಾಪನೆಗೆ ಡೆಲ್ಟ್ ಯೋಜನೆಯಡಿ 4 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು ಉಳಿದ ಅನುದಾನ ಸಾರಿಗೆ ಇಲಾಖೆಯಿಂದ ನೀಡಿ ಕಾಮಗಾರಿ ಶೀಘ್ರ ಆರಂಭಿಸಲಾಗುವುದು. ಶಾಸಕ ಜಿ.ಎಚ್.ಶ್ರೀನಿವಾಸ್ ಅವರ ಮನವಿಯಂತೆ ನೂತನವಾಗಿ ನಿರ್ಮಿಸುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಸ್ವಾತಂತ್ರೃ ಸೇನಾನಿ ಸಂಗೊಳ್ಳಿ ರಾಯಣ್ಣ ಅವರ ಹೆಸರಿಡಲಾಗುವುದು ಎಂದು ಘೋಷಿಸಿದರು.

ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಕ್ಷೇತ್ರದಲ್ಲಿ 1.64 ಕೋಟಿ ಮಹಿಳೆಯರು ಶಕ್ತಿ ಯೋಜನೆ ಮೂಲಕ ಬಸ್‌ನಲ್ಲಿ ಪ್ರಯಾಣಿಸಿದ್ದಾರಾದರೂ, ಗ್ರಾಮೀಣ ಪ್ರದೇಶಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರವಿಲ್ಲದ ಕಾರಣ ಯೋಜನೆಯ ಬಳಕೆ ಕಡಿಮೆಯೇ ಆಗಿದೆ. ಬೀರೂರು-ತರೀಕೆರೆ ನಡುವಿನ ಮುಖ್ಯ ರಸ್ತೆಯಲ್ಲಿರುವ ಶಿವಪುರ ಗ್ರಾಮದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲುಗಡೆಗೆ ಆದೇಶವಿದ್ದರೂ ನಿಲುಗಡೆ ಮಾಡದ ಕಾರಣ ಶಾಲಾ ಕಾಲೇಜಿಗೆ ತೆರಳುವ ಮಕ್ಕಳ ಜತೆ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುವ ಮೂಲಕ ಬಸ್ ನಿಲುಗಡೆಗೆ ಅವಕಾಶ ಮಾಡಿಕೊಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

ಪಟ್ಟಣದ ಮುಖ್ಯರಸ್ತೆ ಅಭಿವೃದ್ಧಿಗೆ 60 ಕೋಟಿ ರೂ., ಪುರಸಭೆ ಕಟ್ಟಡಕ್ಕೆ 8 ಕೋಟಿ, ರಂಗ ಮಂದಿರಕ್ಕೆ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಲಾಗಿದೆ. ತರೀಕೆರೆಯಿಂದ ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯಕ್ಕೆ, ಅಜ್ಜಂಪುರದಿಂದ ಚನ್ನಗಿರಿಗೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಿಸಬೇಕು ಎಂದು ಆಗ್ರಹಿಸಿದರು.

ಪುರಸಭೆ ಅಧ್ಯಕ್ಷ ವಸಂತ್‌ಕುಮಾರ್, ಉಪಾಧ್ಯಕ್ಷೆ ಪಾರ್ವತಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್‌ಕುಮಾರ್, ತರೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ಾರೂಕ್, ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ದಯಾನಂದ್, ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ಕೆಎಸ್‌ಆರ್‌ಟಿಸಿ ಸಹಾಯಕ ಲೆಕ್ಕಾಧಿಕಾರಿ ಜಯಣ್ಣ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net