

ಬೆಂಗಳೂರು: ಸ್ಟಾಕ್ ಇನ್‌ವೆಸ್ಟ್‌ಮೆಂಟ್ ಜಾಹೀರಾತು ನೀಡಿ ಲಕ್ಷಾಂತರ ರೂ.ವಂಚನೆ ಮಾಡುತ್ತಿದ್ದ ಜಾಲಕ್ಕೆ ಬ್ಯಾಂಕ್ ಖಾತೆಗಳ ಪೂರೈಕೆ ಮಾಡುತ್ತಿದ್ದ ಹತ್ತು ಮಂದಿಯನ್ನು ಉತ್ತರ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶ್ರೀನಿವಾಸರೆಡ್ಡಿ(೪೩), ಆಕಾಶ್(೨೭), ಪ್ರಕಾಶ್(೪೩), ಸುನೀಲ್ ಕುಮಾರ್(೪೫), ಸಾಯಿ ಪ್ರಜ್ವಲ್(೩೮), ರವಿಶಂಕರ್(೨೪), ಮಧುಸೂದನ್ ರೆಡ್ಡಿ(೪೧), ಸುರೇಶ್(೪೩), ಕಿಶೋರ್ ಕುಮಾರ್(೨೯) ಮತ್ತು ಒಬುಲ್ ರೆಡ್ಡಿ (೨೯)ಬಂಧಿತರು. ಆರೋಪಿಗಳೆಲ್ಲರೂ ಬೆಂಗಳೂರು ನಿವಾಸಿಗಳಾಗಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರ್‌ವೊಬ್ಬರಿಗೆ ಬರೋಬರಿ ೮೮.೮೩ ಲಕ್ಷ ರೂ. ವಂಚಿಸಿದ್ದರು. ಪ್ರಮುಖ ಆರೋಪಿಗಳು ದುಬೈನಲ್ಲಿದ್ದಾರೆ. ಬಂಧಿತರಿಂದ ೫೧ ಮೊಬೈಲ್‌ಗಳು, ೨೭ ಡೆಬಿಟ್ ಕಾರ್ಡ್‌ಗಳು, ೧೦೮ ಬ್ಯಾಂಕ್ ಪಾಸ್ ಬುಕ್ ಮತ್ತು ಚೆಕ್‌ಗಳು, ೪೮೦ ಸಿಮ್ ಕಾರ್ಡ್‌ಗಳು, ೨ ಲ್ಯಾಪ್‌ಟಾಪ್‌ಗಳು, ೨ ಸಿಪಿಯು, ೪೮ ಅಕೌಂಟ್ ಕ್ಯೂಆರ್ ಕೋಡ್, ೪೨ ರಬ್ಬರ್ ಸ್ಟಾಂಪ್‌ಗಳು, ೧೦೩ ಉದ್ಯಮ್ ಮತ್ತು ಜಿಎಸ್‌ಟಿ ದಾಖಲೆಗಳು, ೨೩೦ ಕರೆಂಟ್ ಅಕೌಂಟ್ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ದೂರುದಾರ ಟೆಕ್ಕಿ ಕೆಲ ದಿನಗಳ ಹಿಂದೆ ಫೇಸ್‌ಬುಕ್‌ಪೇಜ್‌ವೊಂದರಲ್ಲಿ ಬಂದ ಸ್ಟಾಕ್ ಇನ್‌ವೆಸ್ಟ್‌ಮೆಂಟ್ ಜಾಹೀರಾತಿನ ಲಿಂಕ್ ಮೂಲಕ ಬ್ರಾೃಂಡ್‌ವೈನ್ ಗ್ರೂಪ್ ಮತ್ತು ಇ೮ ಬ್ರಾೃಂಡ್‌ವೈನ್ ಗ್ರೂಪ್ ಮಾರ್ಕೆಟಿಂಗ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಬಳಿಕ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿಕೊಂಡಿದ್ದಾರೆ. ನಂತರ ಬ್ರಾೃಂಡಿ ಸ್ಪೀಡ್ ಎಂಬ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಐಪಿಓ ಸಬ್‌ಕ್ರಿಪ್ಶನ್ ಆಗುವುದರಿಂದ ಹೆಚ್ಚು ಆದಾಯ ಬರಲಿದೆ ಎಂದು ನಂಬಿಸಿ ಅ.೧೦ರಿಂದ ನ.೯ರವರೆಗೆ ವಿವಿಧ ಹಂತದಲ್ಲಿ ೮೮.೮೩ ಲಕ್ಷ ರೂ. ಅನ್ನು ವಿವಿಧ ಬ್ಯಾಂಕ್ ಖಾತೆಗಗಳಿಗೆ ಆರೋಪಿಗಳು ವರ್ಗಾಯಿಸಿಕೊಂಡಿದ್ದಾರೆ. ಆ ಬಳಿಕ ತಾವೂ ವಂಚನೆಗೊಳಗಾಗಿರುವುದು ಗೊತ್ತಾಗಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಖಾತೆದಾರ ಮಾಹಿತಿ ಸಂಗ್ರಹಿಸಿ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ದುಬೈನಲ್ಲಿರುವ ಕಿಂಗ್‌ಪಿನ್‌ಗಳು:
ಆರೋಪಿಗಳ ಪೈಕಿ ರವಿಶಂಕರ್ ಈ ಹಿಂದೆ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ಈ ವೇಳೆ ಕೆಲವು ಸೈಬರ್ ವಂಚಕರ ಪರಿಚಯವಾಗಿದೆ. ಬಳಿಕ ಬೆಂಗಳೂರಿಗೆ ಬಂದು ಇತರೆ ಆರೋಪಿಗಳ ಜತೆ ಸೇರಿಕೊಂಡು ಅಮಾಯಕ ವ್ಯಕ್ತಿಗಳಿಗೆ ಕಮಿಷನ್ ಆಮಿಷವೊಡ್ಡಿ ಅವರ ಆಧಾರ್ ಕಾರ್ಡ್, ಪಾನ್ ಕಾರ್ಡ್‌ಗಳನ್ನು ಪಡೆದು ಬ್ಯಾಂಕ್ ಖಾತೆಗಳನ್ನು ತೆರೆದಿದ್ದರು. ಈ ಖಾತೆಗಳ ವಿವರಗಳನ್ನು ದುಬೈನಲ್ಲಿರುವ ವಂಚಕರಿಗೆ ಮಾರಾಟ ಮಾಡುತ್ತಿದ್ದರು. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಇನ್‌ವೆಸ್ಟ್‌ಮೆಂಟ್ ಲಿಂಕ್ ಕಳುಹಿಸುತ್ತಿದ್ದರು. ಬಳಿಕ ಆ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಗಳಿಗೆ ಹೂಡಿಕೆ ಹಣ ಡಬಲ್ ಆಗುತ್ತದೆ ಎಂದು ನಂಬಿಸಿ ಹಣ ಹಾಕಿಸಿಕೊಂಡು ವಂಚಿಸುತ್ತಿದ್ದರು. ಅದಕ್ಕಾಗಿ ಬಂಧಿತರು ತ್ಯಾಗರಾಜನಗರ ಮತ್ತು ಸದಾಶಿವನಗರದಲ್ಲಿ ಎರಡು ಪ್ರತ್ಯೇಕ ಕಚೇರಿಗಳನ್ನು ತೆರೆದಿದ್ದರು. ನಿರ್ದಿಷ್ಟ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗುತ್ತಿದ್ದಂತೆ ದುಬೈನಲ್ಲಿರುವ ವ್ಯಕ್ತಿಗಳ ಖಾತೆಗೆ ವರ್ಗಾವಣೆ ಮಾಡುತ್ತಿದ್ದರು ಎಂದರು.