ಸ್ಕೈವಾಕ್ ನಿರ್ಮಾಣಕ್ಕೆ ಮನವಿ: ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್

highcourt
Published on

ಬೆಂಗಳೂರು:  ರಾಜಧಾನಿಯ ನಾಗರಭಾವಿ ಹೊರವರ್ತುಲ ರಸ್ತೆಯ ಮಾಳಗಾಳ ಬಸ್ ನಿಲ್ದಾಣದ ಬಳಿ ಸ್ಕೈವಾಕ್ ಅಥವಾ ಫುಟ್ ಓವರ್ ಬ್ರಿಡ್ಜ್ ನಿರ್ಮಾಣ ಮಾಡುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಈ ವಿಚಾರವಾಗಿ ಬಸವನಗುಡಿಯ ಬಿಎಂಎಸ್ ಕಾಲೇಜಿನಲ್ಲಿ ವಾಸ್ತುಶಿಲ್ಪಿ ಪ್ರಥಮ ವರ್ಷದಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿನಿ ನಾಗರಭಾವಿಯ ನಿವಾಸಿ ತಿಯಾ ತೆರೆಸೆ ಡಿ’ಸೋಜಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿ ಆಲಿಸಿದ ನ್ಯಾಯಪೀಠ, ಅರ್ಜಿ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತರು, ನಗರ ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿತು. ಅಲ್ಲದೇ ಅರ್ಜಿಯಲ್ಲಿ ಮಾಡಲಾಗಿರುವ ಮನವಿಯ ಸಾಧ್ಯಾಸಾಧ್ಯತೆ ಕುರಿತು ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸುವಂತೆ ಪಾಲಿಕೆಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಅ.19ಕ್ಕೆ ಮುಂದೂಡಿತು.

ಪ್ರತಿನಿತ್ಯ ಮನೆಯಿಂದ ಕಾಲೇಜಿಗೆ ಹೋಗಲು ತಾನು ಸಾರ್ವಜನಿಕ ಸಾರಿಗೆ ಅವಲಂಬಿಸಿದ್ದು, ಬಿಎಂಟಿಸಿ ಬಸ್ ಮೂಲಕ ಪ್ರಯಾಣಿಸುತ್ತೇನೆ. ಬಸ್ ಹತ್ತಲು ಮಾಳಗಾಳ ಬಸ್ ನಿಲ್ದಾಣಕ್ಕೆ ಬರಬೇಕು. ಆದರೆ, ಬಸ್ ನಿಲ್ದಾಣ ತಲುಪಲು ರಸ್ತೆ ದಾಟಬೇಕಾದರೆ ಸಂಚಾರ ದಟ್ಟಣೆಯಿಂದ ಸಾಧ್ಯವಾಗುವುದಿಲ್ಲ. ಕಚೇರಿ ಕೆಲಸಕ್ಕೆ ಹೋಗುವವರು, ಶಾಲಾ-ಕಾಲೇಜುಗಳಿಗೆ ಹೋಗುವ ಮಕ್ಕಳು ಪ್ರತಿನಿತ್ಯ ಕಷ್ಟ ಅನುಭವಿಸಬೇಕಾಗಿದೆ ಎಂದು ಅರ್ಜಿದಾರ ವಿದ್ಯಾರ್ಥಿನಿ ವಿವರಿಸಿದ್ದಾರೆ.

ಈ ಬಗ್ಗೆ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪರಿಹಾರ ಸಿಕ್ಕಿಲ್ಲ. ಆದ್ದರಿಂದ ನ್ಯಾಯಾಲಯ ಪರಿಹಾರ ದೊರಕಿಸಿಕೊಡಬೇಕು. ನಾಗರಭಾವಿ ಹೊರವರ್ತುಲ ರಸ್ತೆಯ ಮಾಳಗಾಳ ಬಸ್ ನಿಲ್ದಾಣದ ಬಳಿ ಸ್ಕೈವಾಕ್ ಅಥವಾ ಫುಟ್ ಓವರ್ ಬ್ರಿಡ್ಜ್ ನಿರ್ಮಾಣ ಮಾಡುವಂತೆ ಸಂಬಂಧ ಇಲಾಖೆಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net