ಸೌಲಭ್ಯ ವಂಚಿತ ಸರ್ಕಾರಿ ಉರ್ದು ಶಾಲೆ

Published on

ಚನ್ನಮ್ಮನ ಕಿತ್ತೂರು: ತಾಲೂಕಿನಲ್ಲಿ 16 ವರ್ಷಗಳ ಹಿಂದೆ ಆರಂಭಿಸಲಾದ ಸರ್ಕಾರಿ ಉರ್ದು ಪ್ರೌಢಶಾಲೆ ಸೌಲಭ್ಯಗಳಿಗಾಗಿ ಇಂದಿಗೂ ಹವಣಿಸುತ್ತಿದೆ. ಈ ಶಾಲೆಯಲ್ಲಿ ಸೂಕ್ತ ಕೊಠಡಿಗಳ ವ್ಯವಸ್ಥೆ ಇಲ್ಲ. ಮೈದಾನ ಇಲ್ಲದ ಕಾರಣ ವಿದ್ಯಾರ್ಥಿಗಳು ಕ್ರೀಡಾಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ. ಕೊಠಡಿಗಳ ಕೊರತೆಯಿಂದಾಗಿ ಒಂದೇ ಕೊಠಡಿಯಲ್ಲಿ 50&60ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಾರೆ.

ಕುಂದಿದ ಕ್ರೀಡಾ ಆಸಕ್ತಿ: ಶಾಲೆ ಆರಂಭವಾದಾಗಿನಿಂದಲೂ ಸೂಕ್ತ ಮೈದಾನದ ವ್ಯವಸ್ಥೆ ಕಲ್ಪಿಸುವಲ್ಲಿ ಸ್ಥಳಿಯ ಆಡಳಿತ ಮಂಡಳಿ ಹಾಗೂ ಜನಪ್ರತಿನಿಧಿಗಳು
ಮುತುವರ್ಜಿ ವಹಿಸದ ಕಾರಣ ಮಕ್ಕಳು ಕ್ರೀಡಾ ಆಸಕ್ತಿ ಕಳೆದುಕೊಂಡಿದ್ದಾರೆ. ಶಾಲೆಯಲ್ಲಿ ಶೌಚಗೃಹ ಇಲ್ಲದ ಕಾರಣ ವಿದ್ಯಾರ್ಥಿಗಳು ನಿತ್ಯ ಸಮಸ್ಯೆ ಅನುಭವಿಸುವಂತಾಗಿದೆ. ಶೌಚಕ್ಕಾಗಿ ಬಯಲನ್ನೇ ಅವಲಂಬಿಸಿರುವ ವಿದ್ಯಾರ್ಥಿಗಳು ಮುಜುಗರಕ್ಕೆ ಒಳಗಾಗುತ್ತಿದ್ದಾರೆ.

ಮುಖ್ಯ ಶಿಕ್ಷಕರಿಗೆ ಕೊಠಡಿ ಇಲ್ಲದ ಕಾರಣ ಅವರು ಅಡುಗೆ ಕೊಠಡಿಯನ್ನೇ ತಮ್ಮ ಕರ್ತವ್ಯಕ್ಕೆ ಬಳಕೆ ಮಾಡುತ್ತಿದ್ದಾರೆ. ಸಹಾಯಕ ಶಿಕ್ಷಕರು ಸಹ ಇದೇ ಕೊಠಡಿಯಲ್ಲಿ ಕುಳಿತು ಕೆಲಸ ಮಾಡುತ್ತಾರೆ. ಶಾಲೆ ಆರಂಭವಾದಾಗಿನಿಂದ ದ್ವೀತಿಯ ದರ್ಜೆ ಸಹಾಯಕನನ್ನು ಸರ್ಕಾರ ನೇಮಕ ಮಾಡಿಲ್ಲ ಎನ್ನುವುದು ಆಡಳಿತ ಮಂಡಳಿಯ ದೂರು. ಸರ್ಕಾರ ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳು ಇನ್ನಾದರೂ ಸೂಕ್ತ ಕ್ರಮಕ್ಕೆ ಮುಂದಾಗಿ ಮಕ್ಕಳು ಭವಿಷ್ಯ ಕಟ್ಟಿಕೊಳ್ಳಲು ನೆರವಾಗಬೇಕು.

ಸರ್ಕಾರದಿಂದ ಖಾಸಗಿ ಸ್ಥಳ ಖರೀದಿಗೆ ಅವಕಾಶ ಕಡಿಮೆ. ಆದರೆ, ದಾನ ನೀಡಿದ ಜಾಗದಲ್ಲಿ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಹಣ ಮಂಜೂರು ಪಡೆಯಬಹುದು.| ಆರ್​.ಟಿ.ಬಳಗಾರ ಬಿಇಒ ಕಿತ್ತೂರು

ತಾಲೂಕಿನಲ್ಲಿರುವುದು ಒಂದೇ ಒಂದು ಉರ್ದು ಮಾಧ್ಯಮ ಪ್ರೌಢಶಾಲೆ. ಸಮಸ್ಯೆಗಳ ಸುಳಿಯಲ್ಲಿ ನರಳುತ್ತಿರುವ ಈ ಶಾಲೆ ಅಭಿವೃದ್ಧಿ ನಿರೀಕ್ಷೆಯಲ್ಲಿದೆ. ಸಂಬಂಧಪಟ್ಟವರು ಗಮನಹರಿಸಬೇಕು.| ಬುಡ್ಡಸಾಬ್​ ಹವಾಲ್ದಾರ್​, ಸರ್ಕಾರಿ ಪ್ರೌಢಶಾಲೆ ಎಸ್​ಡಿಎಂಸಿ, ಸಂಟನೆ ಉಪಾಧ್ಯ, ಕಿತ್ತೂರು

| ನಾಗರಾಜ ಜೋರಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net