

ಸೋಲಾರ್ ಲೈಟ್, ಸೋಲಾರ್ ಪಂಪ್ ಹೀಗೆ ಗ್ರಾಮದ ಪ್ರತಿ ಮನೆಯೊಂದಿಗೆ ಕೃಷಿ ಚಟುವಟಿಕೆಗಳಿಗೆ ಸೌರ ಶಕ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವ ಮೂಲಕ ಮಾದರಿ ಸೌರ ಗ್ರಾಮವಾಗಿ ಹೊರ ಹೊಮ್ಮಲು ಸಕಲ ಸಿದ್ಧತೆ ನಡೆಸಲಾಗುತ್ತಿದೆ.
ಸಿಎಂ ತವರು ಜಿಲ್ಲೆಯ ಏಳು ಗ್ರಾಮಗಳ ನಡುವೆ ಸ್ಪರ್ಧೆ ನಡೆಯುತ್ತಿದ್ದು, ಒಂದು ಕೋಟಿ ರೂ. ಬಹುಮಾನ ಪಡೆಯಲು ಸ್ಥಳೀಯ ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಳೆದ ನಾಲ್ಕು ತಿಂಗಳಿನಿಂದ ಹರಸಾಹಸ ಮಾಡುತ್ತಿದ್ದಾರೆ. ಇನ್ನೆರಡು ತಿಂಗಳಲ್ಲಿ ಯಾವ ಗ್ರಾಮಕ್ಕೆ ಕೋಟಿ ರೂ. ಸಿಗಲಿದೆ ಎಂಬುದು ಘೋಷಣೆಯಾಗಲಿದೆ.
‘ಕೇಂದ್ರ ಸರ್ಕಾರದ ನವೀಕರಿಸಬಹುದಾದ ಇಂಧನ ಸಚಿವಾಲಯದಿಂದ ದೇಶದೆಲ್ಲೆಡೆ ಮಾದರಿ ಸೌರ ಗ್ರಾಮ ಯೋಜನೆಯಡಿ ಸ್ಪರ್ಧೆ ನಡೆಯುತ್ತಿದ್ದು, ಮೈಸೂರು ಜಿಲ್ಲೆಯಲ್ಲಿನ ಏಳು ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಅವುಗಳೆಂದರೆ ವರಕೋಡು, ಬಿಳಿಕೆರೆ, ಗಂಧನಹಳ್ಳಿ, ಸಾಲಿಗ್ರಾಮ, ತಾಂಡವಪುರ, ಮೂಗೂರು ಮತ್ತು ಬೆಟ್ಟದಪುರ ಈ ಏಳು ಗ್ರಾಮಗಳಲ್ಲಿ ಉತ್ತಮವಾಗಿ ಸೌರ ಶಕ್ತಿಯನ್ನು ಬಳಕೆ ಮಾಡಿಕೊಳ್ಳುವ ಗ್ರಾಮಗಳಿಗೆ ಕೋಟಿ ರೂ. ಪ್ರೋತ್ಸಾಹಧನವಾಗಿ ಲಭಿಸಲಿದೆ’ ಎಂದು ಸೆಸ್ಕ್‌ನ ಅಧೀಕ್ಷಕ ಇಂಜಿನಿಯರ್ ಸುನೀಲ್ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ನಡೆದ ಪ್ರಾದೇಶಿಕ ಆಯುಕ್ತರ ನೇತೃತ್ವದ ಸಮಿತಿಯಲ್ಲಿ ಮೈಸೂರು ಜಿಲ್ಲೆಯ ನಾನಾ ತಾಲೂಕುಗಳಿಂದ ಏಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಏಳು ಗ್ರಾಮಗಳನ್ನು ಈ ಮಾದರಿ ಸೌರ ಗ್ರಾಮ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತಿದ್ದು, ಕಳೆದ ನಾಲ್ಕು ತಿಂಗಳಿಂದ ಗ್ರಾಮದ ಜನರಲ್ಲಿ ಸೌರ ಶಕ್ತಿ ಬಳಕೆ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸುವ ಕಾರ್ಯಕ್ರವನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾಡಿದ್ದಾರೆ. ಜತೆಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಪಂಚಾಯಿತಿ ಅನುದಾನದಡಿ ಗ್ರಾಮದ ಬೀದಿಗಳಿಗೆ ಸೋಲಾರ್ ಲೈಟ್‌ಗಳನ್ನು ಅಳವಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸೌರ ಶಕ್ತಿಯ ಮೂಲಕ ಅತಿ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಿ ಬಳಕೆ ಮಾಡುವ ಮೂಲಕ ಕೋಟಿ ರೂ. ಗೆಲ್ಲುವ ಲೆಕ್ಕ್ಕಾಚಾರದಲ್ಲಿ ಗ್ರಾಪಂ ಅಧಿಕಾರಿಗಳು ಇದ್ದಾರೆ.
ಸೌರ ಗ್ರಾಮಕ್ಕೆ ಗೃಹಜ್ಯೋತಿ ಅಡ್ಡಿ:
ಏಳು ಗ್ರಾಮಗಳಲ್ಲಿ ಈಗಾಗಲೇ ಗೃಹ ಜ್ಯೋತಿ ಯೋಜನೆಯಡಿ ಲಾನುಭವಿಗಳಾಗಿರುವ ಜನರು ತಮ್ಮ ಮನೆಗಳಲ್ಲಿ ಸೋಲಾರ್ ಲೈಟ್‌ಗಳನ್ನು ಅಳವಡಿಸಿಕೊಳ್ಳಲು ನಿರಾಸಕ್ತಿ ವಹಿಸುತ್ತಿರುವುದು ಗ್ರಾಪಂ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸೋಲಾರ್ ಪ್ಯಾನಲ್ ಅಳವಡಿಸಿಕೊಂಡರೆ ಗೃಹ ಜ್ಯೋತಿ ಯೋಜನೆಯಿಂದ ವಂಚಿತರಾಗಬೇಕಾಗುತ್ತದೆ ಮತ್ತು ಸೋಲಾರ್ ಪ್ಯಾನಲ್ ಅಳವಡಿಕೆಗೆ ಸಾವಿರಾರು ರೂ. ವೆಚ್ಚ ಮಾಡುವುದೇಕೆ ಎಂದು ಸಾಕಷ್ಟು ಮಂದಿ ನಿರಾಸಕ್ತಿ ವಹಿಸುತ್ತಿದ್ದಾರೆ ಎನ್ನುತ್ತಾರೆ ಗ್ರಾಪಂನ ಅಧಿಕಾರಿಗಳು.