

ನಂಜನಗೂಡು: ಧರ್ಮಸ್ಥಳದಲ್ಲಿ ನಡೆದ ವಿದ್ಯಾರ್ಥಿನಿ ಸೌಜನ್ಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಮತ್ತೆ ಮರುತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿ ನಗರದ ಮಿನಿ ವಿಧಾನಸೌಧದ ಎದುರು ಗುರುವಾರ ಪ್ರಗತಿಪರ ಚಳವಳಿಗಳ ಒಕ್ಕೂಟದಿಂದ ಪ್ರತಿಭಟನೆ ನಡೆಯಿತು.
11 ವರ್ಷದ ಹಿಂದೆ ಧರ್ಮಸ್ಥಳದಲ್ಲಿ ವಿದ್ಯಾರ್ಥಿನಿ ಸೌಜನ್ಯಳನ್ನು ಅಪಹರಿಸಿ ಅತ್ಯಾಚಾರ ಎಸಗಿ ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣದ ಆರೋಪಿ ಸಂತೋಷ್ ರಾವ್ ಎಂಬಾತನನ್ನು ನಿರಪರಾಧಿ ಎಂದು ಬಿಡುಗಡೆ ಮಾಡಿರುವುದು ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.
ಸೌಜನ್ಯ ಪ್ರಕರಣ ಅತ್ಯಂತ ಅಮಾನುಷವಾಗಿ ನಡೆದಿದ್ದ ಕಾರಣ ಸಿಬಿಐ ತನಿಖೆಗೆ ನೀಡಲಾಗಿತ್ತು. ಆದರೆ ಆರೋಪಿಯನ್ನು ನಿರ್ದೋಷಿ ಎಂದು ಬಿಡುಗಡೆ ಮಾಡಲಾಗಿದೆ. ಇದರಿಂದ ಸೌಜನ್ಯ ಕೊಲೆ ಪ್ರಕರಣಕ್ಕೆ ನ್ಯಾಯ ದೊರೆತಂತಾಗಿಲ್ಲ. ಜತೆಗೆ ದುಷ್ಕರ್ಮಿಗಳಿಗೆ ಮತ್ತಷ್ಟು ಇಂಬು ನೀಡಿದಂತಾಗಿದೆ. ಆದ್ದರಿಂದ ಪ್ರಕರಣವನ್ನು ಮತ್ತೆ ಮರುತನಿಖೆಗೆ ಸರ್ಕಾರ ಆದೇಶಿಸಬೇಕು. ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ಬಳಿಕ ಒಕ್ಕೂಟದಿಂದ ಮುಖ್ಯಮಂತ್ರಿಗಳಿಗೆ ಬರೆದಿರುವ ಮನವಿ ಪತ್ರವನ್ನು ಶಿರಸ್ತೇದಾರ್ ಶ್ರೀನಾಥ್ ಅವರ ಬಳಿ ಸಲ್ಲಿಸಿ ಪ್ರತಿಭಟನೆ ಅಂತ್ಯಗೊಳಿಸಲಾಯಿತು.
ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕರಾದ ಚುಂಚನಹಳ್ಳಿ ಮಲ್ಲೇಶ್, ಮಲ್ಲಹಳ್ಳಿ ನಾರಾಯಣ, ಕಾರ್ಯ ಬಸವಣ್ಣ, ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್.ವಿದ್ಯಾಸಾಗರ್, ಜನಸಂಗ್ರಾಮ ಪರಿಷತ್ ಅಧ್ಯಕ್ಷ ನಗರ್ಲೆ ಎಂ.ವಿಜಯಕುಮಾರ್, ಬೊಕ್ಕಹಳ್ಳಿ ಮಹದೇವಸ್ವಾಮಿ, ಸತೀಶ್‌ರಾವ್, ಇಮ್ಮಾವು ರಘು, ಪ್ರತಿಧ್ವನಿ ತ್ರಿನೇಶ್, ದೇವರಸನಹಳ್ಳಿ ಬಸವರಾಜು, ಸಿದ್ದರಾಜು ಶಂಕರಪುರ, ಮುಳ್ಳೂರು ಸ್ವಾಮಿ, ಕಣೇನೂರು ಜಗದೀಶ್, ಮರಿಸ್ವಾಮಿ, ಶಿವಣ್ಣ, ಪ್ರಸಾದ್, ಮಹದೇವ, ಮಂಜುನಾಥ್, ನಾಗೇಶ್, ಕಳಲೆ ಕುಮಾರ್ ಹಲವರಿದ್ದರು.