

ಮದ್ದೂರು: ಸೋಮನಹಳ್ಳಿ ಗ್ರಾಮ ಪಂಚಾಯತಿಯನ್ನು ಮದ್ದೂರು ನಗರಸಭೆಗೆ ಯಾವುದೇ ಕಾರಣಕ್ಕೂ ಸೇರಿಸಿಕೊಳ್ಳಬಾರದೆಂದು ಒತ್ತಾಯಿಸಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಸೋಮನಹಳ್ಳಿ ಅಂದಾನಿ ಮಾತನಾಡಿ, ಸೋಮನಹಳ್ಳಿಯನ್ನು ನಗರಸಭೆಗೆ ಸೇರಿಸಿಕೊಳ್ಳುವುದರಿಂದ ಇಲ್ಲಿನ ಜನರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಪಾಂಕ ಕಡಿತವಾಗುತ್ತದೆ. ನೀರು, ತೆರಿಗೆ ದರ ದುಪ್ಪಟ್ಟಾಗಿ ಗ್ರಾಮಸ್ಥರಿಗೆ ಆರ್ಥಿಕ ಹೊರೆ ಉಂಟಾಗುತ್ತದೆ. ನರೇಗಾ ಯೋಜನೆಗಳು ಕಡಿತವಾಗಿ ನೂರಾರು ಜನರಿಗೆ ಉದ್ಯೋಗ ಇಲ್ಲದಂತಾಗುತ್ತದೆ ಎಂದರು.
ಸೋಮನಹಳ್ಳಿ ಗ್ರಾಪಂ ಮದ್ದೂರು ನಗರ ಸಭೆಗೆ ಸೇರ್ಪಡೆಯಾದರೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚಾಗುತ್ತದೆ. ಆದ್ದರಿಂದ ನಮಗೆ ಗ್ರಾಮ ಪಂಚಾಯಿತಿಯೇ ಸಾಕು, ನಗರಸಭೆ ಬೇಡ. ಇಷ್ಟೆಲ್ಲ ವಿರೋಧದ ನಡುವೆ ಮದ್ದೂರು ನಗರಸಭೆಗೆ ಸೋಮನಹಳ್ಳಿಯನ್ನು ಸೇರಿಸಿಕೊಳ್ಳಲು ಮುಂದಾದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶಾಸಕ ಕೆ.ಎಂ.ಉದಯ್ ಹೆಮ್ಮನಹಳ್ಳಿ ಗ್ರಾಪಂ ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರ ಜತೆ ಮಾತನಾಡುವಾಗ ರೈತ ಹೋರಾಟಗಾರರ ಬಗ್ಗೆ ಲಘುವಾಗಿ ಮಾತನಾಡಿರುವುದು ಸರಿಯಲ್ಲ. ಈ ಕೂಡಲೇ ಅವರು ಹೋರಾಟಗಾರರ ಬಳಿ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ನಿರಂತರವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ತಾಪಂ ಮಾಜಿ ಸದಸ್ಯ ಸತೀಶ್, ಗ್ರಾಪಂ ಮಾಜಿ ಉಪಾಧ್ಯಕ್ಷ ಚಿಕ್ಕೇಗೌಡ, ಮುಖಂಡರಾದ ರಾಜೇಶ, ಸತೀಶ್, ಪ್ರದೀಪ್, ಹುಣಸೇಮರದಸ್ವಾಮಿ, ಮಹೇಶ್‌ಬಾಬು, ರಾಮಕೃಷ್ಣ, ಮನು, ಬಾಬು, ನಾಗರಾಜು, ನವೀನ್, ಹಗಲಪ್ಪ, ಶಿವಣ್ಣ, ಐಶ್ವರ್ಯಾ, ಹೇಮಾವತಿ ಇದ್ದರು.