ಸೋ.ಪೇಟೆಯಲ್ಲಿ ಲಯ್ಸನ್ ಪದಾಧಿಕಾರಿಗಳ ಪದಗ್ರಹಣ

IMG-20230702-WA0008
Published on

ಸೋಮವಾರಪೇಟೆ: ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಶನಿವಾರ ಸಂಜೆ ಲಯನ್ಸ್ ಮತ್ತು ಲಿಯೋ ಕ್ಲಬ್ ಆಫ್ ಸೋಮವಾರಪೇಟೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.

ರೋಟರಿ ಜಿಲ್ಲಾ ಪ್ರಾಂತಪಾಲಕ ಡಾ. ಗೀತಾ ಪ್ರಕಾಶ್ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಮಾತನಾಡಿ, ಲಯನ್ಸ್ ಸಂಸ್ಥೆ ಪ್ರಾರಂಭವಾಗಿ 106 ವರ್ಷಗಳನ್ನು ಪೂರೈಸಿ ವಿಶ್ವದ ಅತಿ ಶ್ರೇಷ್ಠ ಸೇವಾ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಸದಸ್ಯರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಯಾವುದೇ ಸಂ- ಸಂಸ್ಥೆಗಳಲ್ಲಿ ಒಬ್ಬರ ಸೇವೆಗಿಂತಲೂ ಎಲ್ಲರೂ ಸೇರಿ ಮಾಡುವ ಸೇವೆ ಪ್ರಾಮುಖ್ಯತೆ ಪಡೆಯುತ್ತದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಂಸ್ಥೆಯ ಸೇವೆ ಸಿಗುವಂತಾಗಬೇಕು ಎಂದರು.

ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಜೀವನದಲ್ಲಿ ಸಮಾಜ ಸೇವೆ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತದೆ. ಸಮಾಜ ಸೇವೆಯಿಂದ ಹೆಚ್ಚಿನ ಆತ್ಮತೃಪ್ತಿ ಪಡೆಯಬಹುದು. ಆದ್ದರಿಂದ ಸೇವಾ ಸಂಸ್ಥೆಗಳು ಯುವಜನರನ್ನು ಹೆಚ್ಚಾಗಿ ಸದಸ್ಯರನ್ನಾಗಿ ಮಾಡಿಕೊಳ್ಳುವ ಮೂಲಕ ಸಮಾಜ ಸೇವಾ ಕಾರ್ಯದಲ್ಲಿ ಅವರನ್ನು ಕೊಂಡೊಯ್ಯಬೇಕೆಂದರು.

ಇದೇ ಸಂದರ್ಭ ವೈದ್ಯರ ದಿನದ ಅಂಗವಾಗಿ ಡಾ.ಮಂತರ್ ಗೌಡ ಹಾಗೂ ಡಾ.ಗೀತಾ ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. ಡಾ.ವಿಜಯ್ ಅಂಗಡಿ ಅವರ ‘ರೈತಧ್ವನಿ’ ಕೃತಿಯನ್ನು ಬಿಡುಗಡೆ ಮಾಡಲಾಯಿತು.

ನೂತನ ಸಾಲಿನ ಅಧ್ಯಕ್ಷ ಎ.ಎಸ್.ಮಹೇಶ್, ಕಾರ್ಯದರ್ಶಿ ಸಿ.ಕೆ.ಶಿವಕುಮಾರ್, ಖಜಾಂಚಿ ಕೆ.ಡಿ. ವೀರಪ್ಪ, ಲಿಯೋ ಸಂಸ್ಥೆ ಅಧ್ಯಕ್ಷೆ ಒ.ಪಿ.ಪ್ರತೀಕ್ಷಾ, ಕಾರ್ಯದರ್ಶಿ ಹಿಮಾನಿ, ಖಜಾಂಚಿ ಪುಷ್ಪಾಂಜಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ , ಪ್ರಾಂತೀಯ ಅಧ್ಯಕ್ಷ ಅಂಬೆಕಲ್ ನವೀನ್, ವಲಯ ಸಂಯೋಜಕರಾದ ಮಹದೇವ್, ಕವಿತಾ, ಲಯನ್ಸ್ ಸಂಸ್ಥೆಯ ನಿರ್ಗಮಿತ ಅಧ್ಯಕ್ಷ ಸಿ.ಕೆ.ರೋಹಿತ್, ಕಾರ್ಯದರ್ಶಿ ಕೆ.ಎನ್. ಶಿವಕುಮಾರ್, ಖಜಾಂಚಿ ಜಿ.ಟಿ.ಯೋಗೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net