ಸೊಸೈಟಿಗಳಲ್ಲಿ ಭ್ರಷ್ಟತೆಗೆ ಅವಕಾಶ ನೀಡಬೇಡಿ: ಶಾಸಕ ಕೆ.ಆರ್.ರಮೇಶ್ ಕುಮಾರ್ ಮನವಿ, ರೈತರಿಗೆ ₹1.21 ಕೋಟಿ ಬೆಳೆಸಾಲ ವಿತರಣೆ

30-klr-1
Published on

ಕೋಲಾರ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರು ರೈತರು, ಮಹಿಳೆಯರು, ಬೀದಿಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಕಾರ್ಯದಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದಾರೆ, ಅದೇ ರೀತಿ ಸೊಸೈಟಿಗಳಲ್ಲಿ ಯಾವುದೇ ಸಂದರ್ಭದಲ್ಲೂ ಭ್ರಷ್ಟಾಚಾರ ನಡೆಯದಂತೆ ಎಚ್ಚರವಹಿಸಿದಾಗ ವಿರೋಧಿಗಳ ಒಲವು ಗಳಿಸಲು ಹಾಗೂ ಆರೋಪಗಳಿಂದ ಮುಕ್ತರಾಗಲು ಸಾಧ್ಯ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್ ಹೇಳಿದರು.

ತಾಲೂಕಿನ ಸುಗಟೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆಶ್ರಯದಲ್ಲಿ ಶನಿವಾರ ಡಿಸಿಸಿ ಬ್ಯಾಂಕಿನಿಂದ ಆಯೋಜಿಸಿದ್ದ 79 ರೈತರಿಗೆ 1.21 ಕೋಟಿ ರೂ. ಬೆಳೆ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಗೋವಿಂದಗೌಡರು ಬ್ಯಾಂಕಿನ ಕಾವಲುಗಾರನಂತೆ ಕೆಲಸ ಮಾಡುತ್ತಿರುವುದರಿಂದ ಬ್ಯಾಂಕಿಗೆ ಉತ್ತಮ ಹೆಸರು ಬಂದಿದೆ. ಸೊಸೈಟಿಗಳಲ್ಲಿ ನಡೆಯುವ ಅಕ್ರಮಗಳನ್ನು ತಡೆಯದಿದ್ದರೆ ಅನಗತ್ಯ ಆರೋಪಗಳಿಗೆ ತುತ್ತಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಡಿಸಿಸಿ ಬ್ಯಾಂಕ್ ದಿವಾಳಿಯಾಗಿದ್ದಾಗ ಯಾರೊಬ್ಬರೂ ಚಕಾರ ಎತ್ತಲಿಲ್ಲ, ಗೋವಿಂದಗೌಡರ ನೇತೃತ್ವದಲ್ಲಿ ಹೊಸ ಆಡಳಿತ ಮಂಡಳಿ ರಚನೆಗೊಂಡ ನಂತರ ಅನೇಕ ಹಿರಿಯ ಮುಖಂಡರು, ಸಹಕಾರಿಗಳ ಬೆಂಬಲದಿಂದ ಬ್ಯಾಂಕ್ ಮರುಜೀವ ಪಡೆಯಲು ನಡೆಸಿದ ಹೋರಾಟಕ್ಕೆ ತಕ್ಕಮಟ್ಟಿಗೆ ಪ್ರತಿಫಲ ಸಿಕ್ಕಿದೆ. ವಿರೋಧಿಗಳ ಟೀಕೆ, ಆರೋಪಗಳಿಗೆ ಅಳುಕದೆ ಆಶೀರ್ವಾದ ಎಂದು ತಿಳಿದು ಬ್ಯಾಂಕನ್ನು ಇನ್ನಷ್ಟು ಅಭಿವೃದ್ಧಿಪಡಿಸಲು, ಜನಪ್ರಿಯತೆ ಹೆಚ್ಚಿಲು ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.

ಬ್ಯಾಂಕಿನಿಂದ ಸಾಲ ಪಡೆದವರು ಅಗತ್ಯಕ್ಕೆ ಹಣ ಬಳಕೆ ಮಾಡಿಕೊಂಡು ಅಭಿವೃದ್ಧಿ ಸಾಧಿಸುವ ಜತೆಗೆ ಸಕಾಲಕ್ಕೆ ಮರು ಪಾವತಿ ಮಾಡುವ ಮೂಲಕ ಬೇರೆಯವರಿಗೂ ಹಣಕಾಸಿನ ನೆರವು ಸಿಗಲು ಸಹಕರಿಸಬೇಕೆಂದು ಕೆರೆ ನೀಡಿದರು.

ಡಿಸಿಸಿ ಬ್ಯಾಂಕ್ ಎಂದರೆ ಬರೀ ಸಾಲಕ್ಕೆ ಮಾತ್ರವಲ್ಲ, ನಿಮ್ಮ ಉಳಿತಾಯದ ಹಣವನ್ನು ಠೇವಣಿ ಇಡಿ, ಹೆಚ್ಚಿನ ಬಡ್ಡಿಯೂ ಸಿಗುತ್ತದೆ, ನಿಮ್ಮಂತ ಮತ್ತಷ್ಟು ರೈತರಿಗೆ ನೆರವು ನೀಡುವ ಶಕ್ತಿಯೂ ಬರುತ್ತದೆ ಎಂದು ಎಂ.ಎಲ್.ಅನಿಲ್ ಕುಮಾರ್ ಕಿವಿಮಾತು ಹೇಳಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಡಿಸಿಸಿ ಬ್ಯಾಂಕ್ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಲ ಒದಗಿಸುವ ಸಂಕಲ್ಪ ಮಾಡಿದೆ, ಪ್ರತಿ ತಾಲೂಕಿಗೂ ಕನಿಷ್ಠ 100 ಕೋಟಿ ರೂ. ಸಾಲ ನೀಡುವ ಗುರಿ ಹೊಂದಲಾಗಿದೆ ಎಂದರು.

ಸುಗಟೂರು ಸೊಸೈಟಿ ಅಧ್ಯಕ್ಷ ಎ.ಸಿ.ಭಾಸ್ಕರ್ ಮತ್ತವರ ತಂಡದಿಂದ ಗೋವಿಂದಗೌಡರನ್ನು ಸನ್ಮಾನಿಸಲಾಯಿತು. ಜಿಪಂ ಮಾಜಿ ಅಧ್ಯಕ್ಷ ಜನ್ನಘಟ್ಟ ವಿ.ವೆಂಕಟಮುನಿಯಪ್ಪ, ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್, ಗೋವಿಂದರಾಜು, ವೆಂಕಟರೆಡ್ಡಿ, ಮುಖಂಡ ಸಿ.ಎಂ.ಮುನಿಯಪ್ಪ, ಜನ್ನಘಟ್ಟ ಗ್ರಾಪಂ ಅಧ್ಯಕ್ಷ ಸತೀಶ್ ಮೂರ್ತಿ, ಸುಗಟೂರು ಗ್ರಾಪಂ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಸೊಸೈಟಿ ಉಪಾಧ್ಯಕ್ಷೆ ರುಕ್ಕಮ್ಮ, ನಿರ್ದೇಶಕರಾದ ವೆಂಕಟರಾಮರೆಡ್ಡಿ, ಅಮರನಾರಾಯಣಸ್ವಾಮಿ, ವೆಂಕಟರಾಮಪ್ಪ ಇತರರಿದ್ದರು.

ಮೀಟರ್ ಬಡ್ಡಿ ದಂಧೆಯಿಂದ ಪಾರು: ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್ ಪಡಿತರ ವಿತರಣೆಗೆ ಸೀಮಿತವಾಗಿತ್ತು, ಗೋವಿಂದಗೌಡರ ಅಧ್ಯಕ್ಷತೆಯಲ್ಲಿ ರಚನೆಗೊಂಡ ಆಡಳಿತ ಮಂಡಳಿ ಸಹಕಾರ ಸಂಘಗಳಿಗೆ ಕಾಯಕಲ್ಪ ನೀಡಿದ ಮೇಲೆ ಸುಧಾರಣೆ ಹಾದಿಯಲ್ಲಿ ಸಾಗಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಸುಗಟೂರು ಸೊಸೈಟಿಗೆ ಹಿರಿಯ ಸಹಕಾರಿ ದಿ.ತಿಮ್ಮರಾಮಯ್ಯ ಜೀವ ತುಂಬಿದ್ದಾರೆ, ಇದರಿಂದ ಈ ಭಾಗದ ಮಹಿಳೆಯರು ಮೀಟರ್ ಬಡ್ಡಿ ದಂಧೆಯಿಂದ ಮುಕ್ತರಾಗಲು ಅವಕಾಶ ಸಿಕ್ಕಿತು. ಫ್ಯಾಕ್ಸ್‌ಗಳ ಗಣಕೀಕರಣದಿಂದ ಪಾರದರ್ಶಕ ಆಡಳಿತಕ್ಕೆ ಅವಕಾಶವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಅಭಿಪ್ರಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net