ಸೈಬರ್ ಅಪರಾಧಗಳ ಬಗ್ಗೆ ಜಾಗ್ರತೆ ಇರಲಿ: ರಾಜಣ್ಣ|Cyber Crimes

cy
Published on

ಬೆಂಗಳೂರು: ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಜಾಗ್ರತೆ ವಹಿಸಬೇಕು(Be aware of cyber crimes) ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ(K N Rajanna)ಸಲಹೆ ನೀಡಿದರು.

ನಗರದ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನ ಹಿರಿಯ ಅಧಿಕಾರಿಗಳಿಗೆ ರಾಜ್ಯ ಮಟ್ಟದ ಹೈಟೆಕ್ ಮಾದರಿ ತರಬೇತಿ ಉದ್ಘಾಟಿಸಿ ಮಾತನಾಡಿದರು.

ಆನ್‌ಲೈನ್ ಹಣ ಪಾವತಿ ಸಂದರ್ಭದಲ್ಲಿ ಸೂಕ್ಷ್ಮ ಪರಿಶೀಲನೆ ನಡೆಸಿ ವಹಿವಾಟು ಮಾಡಬೇಕು. ತಂತ್ರಜ್ಞಾನದಲ್ಲಿ ಕಾಲ ಕಾಲಕ್ಕೆ ಬದಲಾವಣೆಗಳಾಗುತ್ತವೆ. ಆ ಬದಲಾವಣೆಗೆ ಹೊಂದಿಕೊಳ್ಳಬೇಕು. ತಾಂತ್ರಿಕ ಕೌಶಲವನ್ನು ರೂಢಿಸಿಕೊಳ್ಳಬೇಕು. ಸೈಬರ್ ಅಪರಾಧಗಳ ತಡೆಗೆ ಪರಿಣಿತಿ ಹೊಂದಬೇಕು ಎಂದು ಕಿವಿ ಮಾತು ಹೇಳಿದರು.

ಸಹಕಾರ ಕ್ಷೇತ್ರದಲ್ಲಿ ಸಣ್ಣ ಅಪರಾಧವಾದರೂ ಅದನ್ನು ದೊಡ್ಡದಾಗಿ ಬಿಂಬಿಸಲಾಗುತ್ತದೆ. ಆದ್ದರಿಂದ ಸಹಕಾರ ಕ್ಷೇತ್ರದಲ್ಲಿ ವಿಶ್ವಾಸ ಉಳಿಸಿಕೊಳ್ಳುವುದು ಸವಾಲಿನ ಕೆಲಸವೂ ಆಗಿದೆ ಎಂದು ತಿಳಿಸಿದರು.

ಸಹಕಾರ ಚಳವಳಿ ಜನರ ಚಳವಳಿಯಾಗಿದ್ದು, ಜನರ ನಂಬಿಕೆ ಗಳಿಸಿ ಎಚ್ಚರಿಕೆ ಹೆಜ್ಜೆ ಇಡಬೇಕು. ಸಹಕಾರ ಅಭಿವೃದ್ಧಿಗೆ ನಾಯಕತ್ವದ ಅವಶ್ಯಕತೆಯೂ ಇದ್ದು, ಉತ್ತಮ ನಾಯಕತ್ವ ಹೊಂದುವ ಮೂಲಕ ಸಹಕಾರ ಸಂಸ್ಥೆಗಳು ಬಲಿಷ್ಠವಾಗಬೇಕು. ಅಧಿಕಾರಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಮಾತನಾಡಿ, ಅಪೆಕ್ಸ್ ಬ್ಯಾಂಕ್ ರೈತರ ಬ್ಯಾಂಕ್. ತಂತ್ರಜ್ಞಾನ ಅಳವಡಿಕೆಯೊಂದಿಗೆ ರೈತರ ಏಳ್ಗೆಗೆ ಶ್ರಮಿಸುತ್ತಿದೆ ಎಂದರು.

ಸಾಲ ಮರುಪಾವತಿ ಬಗ್ಗೆ ಅಧಿಕಾರಿಗಳು ಕಾಲ ಕಾಲಕ್ಕೆ ಖಾತೆದಾರರಿಗೆ ಮನವರಿಕೆ ಮಾಡಿಕೊಟ್ಟು ಮಾದರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಆಡಳಿತದಲ್ಲಿ ಲೋಪ ಕಂಡು ಬಂದರೆ ತಕ್ಷಣವೇ ಸರಿಪಡಿಸುವ ಕೆಲಸ ಮಾಡಿದಾಗ ಕಾರ್ಯದಕ್ಷತೆ ಜತೆಗೆ ಬ್ಯಾಂಕ್‌ನ ಬೆಳವಣಿಗೆ ಬಗ್ಗೆ ಬದ್ಧತೆ ತೋರಿದಂತಾಗುತ್ತದೆ ಎಂದರು.

ಸಹಕಾರ ಸಚಿವರ ವಿಶೇಷಾಧಿಕಾರಿ ಜಿ.ಎಸ್.ರಮಣರೆಡ್ಡಿ, ಸಹಕಾರ ಮಹಾಮಂಡಳದ ನಿರ್ದೇಶಕರಾದ ಎನ್.ಗಂಗಣ್ಣ, ಎಚ್.ವಿ.ನಾಗರಾಜ್, ಆರ್.ರಾಮರೆಡ್ಡಿ, ವಿ.ಸಿ.ನಾಗರಾಜ್, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್.ನವೀನ್, ಕಾರ್ಯದರ್ಶಿ ಲಕ್ಷ್ಮೀಪತಯ್ಯ, ಎಂ.ಕೆ.ಬೆಳ್ಳಿಯಪ್ಪ, ನೋಡಲ್ ಅಧಿಕಾರಿ ಎಂ.ಮಲ್ಲರಾಜ್ ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್, ಬೆಂಗಳೂರು ನಗರ ಜಲ್ಲಾ ಸಹಕಾರ ಒಕ್ಕೂಟ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಕಾರ ಒಕ್ಕೂಗಳು ಈ ತರಬೇತಿ ಆಯೋಜಿಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net