ಸೈಬರ್ ಅಪರಾಧ ಮಟ್ಟಹಾಕಲು ನಿಯಂತ್ರಣ ಕೊಠಡಿ; ಶೀಘ್ರದಲ್ಲಿ ಕಾರ್ಯಾರಂಭ

Published on

ಬೆಂಗಳೂರು: ಸೈಬರ್ ಅಪರಾಧ ಪ್ರಕರಣಗಳನ್ನು ಮಟ್ಟಹಾಕಲು ಸುಸಜ್ಜಿತ ‘ಸೈಬರ್ ನಿಯಂತ್ರಣ ಕೊಠಡಿ’ ಸಜ್ಜಾಗಿದ್ದು, ಶೀಘ್ರವೇ ಕಾರ್ಯಾರಂಭವಾಗಲಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.

ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆ ಆವರಣದಲ್ಲಿ ಗುರುವಾರ ಆಗ್ನೇಯ ವಿಭಾಗದ ಸಿಇಎನ್ ಠಾಣೆಯ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಗರದಲ್ಲಿ ವರ್ಷದಿಂದ ವರ್ಷಕ್ಕೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನು ಮಟ್ಟಹಾಕಲು ಎಲ್ಲ ರೀತಿಯ ನೆರವು ನೀಡುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಸಮ್ಮತಿಸಿದೆ. ಸಾರ್ವಜನಿಕರು ಸೈಬರ್ ವಂಚನೆಗೊಳಗಾದರೆ, ‘ನಮ್ಮ 100’ಗೆ ಕರೆ ಮಾಡಿ ದೂರು ಮುಟ್ಟಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಇದೇ ದೂರನ್ನು ಆಧರಿಸಿ ತನಿಖೆ ಕೈಗೊಳ್ಳಲು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.

ಸೈಬರ್ ನಿಯಂತ್ರಣ ಕೊಠಡಿ ಆರಂಭವಾದ ಬಳಿಕ ಡಯಲ್-100ಗೆ ಕರೆ ಮಾಡಿದರೆ ಆಯ್ಕೆಗಳು ಬರಲಿವೆ. ಈ ಮೂಲಕ ಸಂಖ್ಯೆಯನ್ನು ಆಯ್ಕೆ ಮಾಡಿ ಸೈಬರ್ ವಂಚನೆಯ ದೂರು ನೀಡಬೇಕು. ನಿಯಂತ್ರಣ ಕೊಠಡಿಯಲ್ಲೇ ದೂರು ಸ್ವೀಕರಿಸಲು ಪ್ರತ್ಯೇಕ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಇಲ್ಲಿಗೆ ಬರುವ ದೂರು ಆಧಾರಿಸಿ ಸಿಬ್ಬಂದಿ, ಬ್ಯಾಂಕ್‌ಗಳಿಗೆ ಇಮೇಲ್ ಕಳುಹಿಸಿ ವಿವರ ಸಲ್ಲಿಸಲಿದ್ದಾರೆ. ಇದೆಲ್ಲ ಕೇವಲ ಐದಾರು ನಿಮಿಷದಲ್ಲಿ ಪ್ರಕ್ರಿಯೆ ನಡೆಯಲಿದೆ. ಸಾರ್ವಜನಿಕರು ಹಣ ಕಳೆದುಕೊಂಡ ಮೊದಲ ಒಂದು ಗಂಟೆ ಗೋಲ್ಡನ್ ಅವರ್’ ಆಗಿರುತ್ತದೆ. ಈ ಸಮಯದಲ್ಲಿ ಆರೋಪಿ ಖಾತೆಗೆ ಹಣ ಬಿದ್ದಿರುವುದನ್ನು ತಡೆಯಲು ಸಹಕಾರಿಯಾಗಲಿದೆ. ಇದಕ್ಕಾಗಿ ಸಾಫ್ಟ್‌ವೇರ್ ಹಾಗೂ ಆ್ಯಪ್‌ಗಳು ರೂಪಿಸಲಾಗಿದೆ. ವಂಚನೆಯಾದ ಒಂದು ಗಂಟೆಯೊಳಗೆ ನಿಯಂತ್ರಣ ಕೋಠಡಿಗೆ ದೂರು ಮುಟ್ಟಿಸಬೇಕು ಎಂದರು.

ಯಾರೇ ಬ್ಯಾಂಕಿಗೆ ಸಂಬಂಧಿಸಿದ ವೈಯಕ್ತಿಕ ಮಾಹಿತಿ ಅಥವಾ ಒಟಿಪಿ ಸಂಖ್ಯೆ ಕೇಳಿದರೆ ಹೇಳಬಾರದು. ಒಟ್ಟಾರೆ ಸೈಬರ್ ವಂಚನೆ ತಡೆಗೆ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ನಗರದಲ್ಲಿರುವ ಎಂಟು ಸಿಇಎನ್ ಪೊಲೀಸ್ ಠಾಣೆಗಳಿಗೆ ನುರಿತ ತಜ್ಞರನ್ನು ಎರವಲು ಸೇವೆ ಮೇಲೆ ನೇಮಕ ಮಾಡಿಕೊಳ್ಳಲಾಗುವುದು. ಈ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ನಗರ ಬೇರೆ ಸಿಇಎನ್ ಠಾಣೆಗಳಿಗಿಂತ ಆಗ್ನೇಯ ವಿಭಾಗದ ಸಿಇಎನ್ ಠಾಣೆಯನ್ನು ಕಾರ್ಪೋರೇಟ್ ಮಾದರಿಯಲ್ಲಿ ವಿನ್ಯಾಸ ಮಾಡಲಾಗಿದೆ. ಇದಕ್ಕೆ ಶ್ರಮಿಸಿದ ಇನ್‌ಸ್ಪೆಕ್ಟರ್ ರಾಜೇಶ್ ಮತ್ತು ಸಿಬ್ಬಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾಗದ ರಹಿತ ಕೆಲಸವನ್ನು ಕಡಿಮೆ ಮಾಡಿ, ಡಿಜಿಟಲ್‌ಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net