ಸೈನಿಕರ ಬಗ್ಗೆ ಕೊತ್ತೂರು ಮಂಜುನಾಥ್ ಹೇಳಿಕೆ ಸತ್ಯಕ್ಕೆ ದೂರ / ಬೆಂಬಲಿಗರ ಸ್ಪಷ್ಟನೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಸೈನಿಕರ ಬಗ್ಗೆ ಎಳ್ಳಷ್ಟು ಕೀಳಾಗಿ, ವಿರುದ್ಧವಾಗಿ ಶಾಸಕರು ಮಾತನಾಡಿಲ್ಲ. ಯುದ್ಧ ಮಾಡಲು ಅವಕಾಶ ದೊರಕಿದ್ದು, ಪರಿಪೂರ್ಣವಾಗಿ ಉಗ್ರರನ್ನು ನಾಶ ಮಾಡಬಹುದಾಗಿತ್ತು. ಮೂರನೇಯವರ ಮಾತು ಕೇಳಿ ಕದನ ವಿರಾಮ ತೆಗೆದುಕೊಳ್ಳಬಾರದಿತ್ತು. ದೇಶದ ಜನತೆಗೆ ಸಮಾಧಾನ ತರಲಿಲ್ಲವೆಂದು ಮಾತ್ರ ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿರುವುದು ಎಂದು ನಗರಸಭೆ ಸದಸ್ಯ ಅಂಬರೀಶ್ ಸ್ಪಷ್ಟಣೆ ನೀಡಿದ್ದಾರೆ.

ಪಹಲ್ಲಾಮ್ ದಾಳಿ ಹಿನ್ನಲೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮತ್ತು ಭಾರತೀಯ ಸೈನಿಕರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆಂದು ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ಜಿಲ್ಲಾ ಬಿಜೆಪಿಯಿಂದ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೇಶದ್ರೋಹ ಕೇಸು ದಾಖಲಿಸಲು ದೂರು ನೀಡಿರುವ ಕಾರಣ ಶಾಸಕರ ಬೆಂಬಲಿಗರು ನಗರದ ಶಾಸಕರ ಕಛೇರಿಯ ಬಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸೈನಿಕರ ಹಿತವನ್ನು ಕಾಯುವ ಶಾಸಕರು, ಸೈನಿಕರ ಯಾವುದೇ ಕೆಲಸವಾಗಲಿ ಹಾಗೂ ಕಾರ್ಗಿಲ್ ವಿಜಯೋತ್ಸವ ಸಮಯದಲ್ಲಿ ಸಹಕಾರ ಬೆಂಬಲವನ್ನು ನೀಡುತ್ತಾ ಬಂದಿದ್ದಾರೆ. ಬಿಜೆಪಿ ಪಕ್ಷವು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಶಾಸಕರ ಹೇಳಿಕೆಯನ್ನು ತಿರುಚಿ ಕೊತ್ತೂರು ಮಂಜುನಾಥ್ ಅವರ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ವಕ್ಕಲೇರಿ ಗ್ರಾಪಂ ಮಾಜಿ ಅಧ್ಯಕ್ಷ ಮೈಲಾಂಡಹಳ್ಳಿ ಮುರುಳಿ ಮಾತನಾಡಿ, ಭಾರತದ ಪ್ರಜಾಪ್ರಭುತ್ವ, ಏಕತೆಗೆ ಧಕ್ಕೆ ಬರದಂತೆ ಸಂವಿಧಾನಾತ್ಮಕವಾಗಿ ನಡೆದುಕೊಂಡು ಬರುತ್ತಿರುವ ಶಾಸಕರು ಯಾವುದೇ ರೀತಿಯ ವಿವಾದಾತ್ಮಕ ಹೇಳಿಕೆಯನ್ನು ನೀಡಿಲ್ಲ. ಒಬ್ಬ ಸಾರ್ವಜನಿಕರಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ಸರಿಯಾಗಿ ಆಗಿಲ್ಲ ಎಂದು ದೇಶದ ಜನರ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ ವಿನಃ ಸೈನಿಕರ ಕರ್ತವ್ಯದ ಬಗ್ಗೆ ಅವರು ಮಾತಾಡಲಿಲ್ಲ ಎಂದು ವಿವರಿಸಿದರು.

ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅಧ್ಯಕ್ಷ ವೈ.ಶಿವಕುಮಾರ್, ನಗರಸಭೆ ಸದಸ್ಯರಾದ ಸುರೇಶ್, ಅಪ್ಸರ್, ನಾಮಿನಿ ಸದಸ್ಯ ಅಮರನಾಥ್, ಮುಖಂಡರಾದ ಖಾದ್ರಿಪುರ ಬಾಬು, ಕಠಾರಿಪಾಳ್ಯ ಬಾಲು, ನರಸಾಪುರ ಬಾನು, ನಾಗಲಾಪುರ ಪಾಟಿಲ್, ಮುದುವತ್ತಿ ಶಿವು ಮತ್ತಿತರರು ಹಾಜರಿದ್ದರು.

ಚಿತ್ರ ೧೭ ಕೆ.ಎಲ್.ಆರ್. ೦೬ : ಶಾಸಕ ಕೊತ್ತೂರು ಮಂಜುನಾಥ್ ಬೆಂಬಲಿಗರು ಶಾಸಕರ ಕಛೇರಿ ಬಳಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿರುವ ನಗರಸಭಾ ಸದಸ್ಯ ಅಂಬರೀಷ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಶಿವಕುಮಾರ್, ಮೈಲಾಂಡಹಳ್ಳಿ ಮುರಳಿ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net