ಸೈಕಲ್‌ನಲ್ಲೇ 2,400 ಕಿ.ಮೀ. ಕ್ರಮಿಸಿದ ಭೂಪ : ಮೊಹಾಲಿಯಿಂದ ಚನ್ನಪಟ್ಟಣ ಕಳ್ಳಿಹೊಸೂರಿಗೆ 16 ದಿನ ಸವಾರಿ ಮಾಡಿದ ಡಾ.ಕೆ.ಎಸ್.ದಿನೇಶ್

4-cpt-1p
Published on

ಚನ್ನಪಟ್ಟಣ :  ಹಿರಿಯರನ್ನು ಪೂಜಿಸುವ ಪಿತೃಪಕ್ಷ (ಮಹಾಲಯ ಅಮಾವಾಸ್ಯೆ) ದಲ್ಲಿ ಭಾಗವಹಿಸಲು ಹಾಗೂ ಸೈಕ್ಲಿಂಗ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ತಾಲೂಕಿನ ಕಳ್ಳಿಹೊಸೂರು ಗ್ರಾಮದ ಡಾ.ಕೆ.ಎಸ್.ದಿನೇಶ್ (47) ಸೈಕಲ್ ಸವಾರಿ ಮೂಲಕ ಬರೋಬ್ಬರಿ 2400 ಕಿ.ಮೀ. ಕ್ರಮಿಸಿ ಹುಟ್ಟೂರು ತಲುಪಿ ಸಾಧನೆ ಮಾಡಿದ್ದಾರೆ.

ಗ್ರಾಮದ ನಿವೃತ್ತ ಶಿಕ್ಷಕರಾದ ಸಿದ್ದಯ್ಯ ಹಾಗೂ ಲಕ್ಷ್ಮಮ್ಮ ಎಂಬುವವರ ಪುತ್ರ ಡಾ.ಕೆ.ಎಸ್.ದಿನೇಶ್, ಪಂಜಾಬ್‌ನ ಮೊಹಾಲಿಯಿಂದ ಕಳ್ಳಿ ಹೊಸೂರಿಗೆ ಸೈಕಲ್‌ನಲ್ಲಿ ಆಗಮಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ವೃತ್ತಿಯಲ್ಲಿ ಪಂಜಾಬ್‌ನ ರೂಪಾರ್‌ನಲ್ಲಿರುವ ಐಐಟಿಯಲ್ಲಿ ಗ್ರಂಥಪಾಲಕರಾಗಿರುವ ದಿನೇಶ್, ಪ್ರವೃತ್ತಿಯಲ್ಲಿ ಸೈಕ್ಲಿಸ್ಟ್. ಕಾಲೇಜು ವಿದ್ಯಾಭ್ಯಾಸದ ಸಂದರ್ಭದಲ್ಲೇ ಸಾಹಸ ಮನೋಭಾವ ಹಾಗೂ ಹೊಸತನದ ಬಗ್ಗೆ ಒಲವು ಇಟ್ಟುಕೊಂಡಿದ್ದ ಇವರು, ಹುಟ್ಟೂರಿನಿಂದ ಸಾವಿರಾರು ಕಿ.ಮೀ. ದೂರ ಹೋಗಿ ಬದುಕು ಕಟ್ಟಿಕೊಂಡಿದ್ದಾರೆ.

ಚನ್ನಪಟ್ಟಣ ನಗರದಿಂದ 4 ಕಿ.ಮೀ. ದೂರವಿರುವ ಕಳ್ಳಿಹೊಸೂರು ಸಾರಿಗೆ ಸಂಪರ್ಕವಿಲ್ಲದ ಚಿಕ್ಕ ಗ್ರಾಮ. ಈ ಗ್ರಾಮದ ದಿನೇಶ್ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯದಲ್ಲಿ ಪಿಎಚ್‌ಡಿ ಮಾಡಿದ್ದಾರೆ. ಹೆಂಡತಿ ಮತ್ತು ಮಕ್ಕಳು ಮೊಹಾಲಿಯಲ್ಲಿಯೇ ಇದ್ದಾರೆ.

ಒಟ್ಟಾರೆ.., ಹಿರಿಯರನ್ನು ನೆನಪಿಸಿಕೊಳ್ಳುವ ಪಿತೃಪಕ್ಷದಲ್ಲಿ ಪಾಲ್ಗೊಳ್ಳಲು ಸೈಕಲ್ ಏರಿ ಬಂದಿರುವ ಡಾ. ದಿನೇಶ್ ಸಾಧನೆ ಬಗ್ಗೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪತ್ರಿಕೆಯೊಂದಿಗೆ ಸೈಕಲ್ ಸವಾರಿಯ ಅನುಭವ ಹಂಚಿಕೊಂಡಿರುವ ಡಾ. ದಿನೇಶ್, ಬೆಳಗ್ಗೆ 5 ಗಂಟೆಗೆ ಸವಾರಿ ಆರಂಭಿಸಿ ಸಂಜೆ 7 ಗಂಟೆಗೆ ಕೊನೆಗೊಳಿಸಿ, ದಾರಿಯಲ್ಲಿ ಸಿಗುವ ಹೋಟೆಲ್‌ಗಳಲ್ಲಿ ವಾಸ್ತವ್ಯ ಮಾಡುತ್ತಿದ್ದೆ. ದಾರಿಯುದ್ದಕ್ಕೂ ಅಪಾರವಾದ ಅನುಭವಗಳು ಸಿಕ್ಕಿದವು. ವಿವಿಧ ತರಹದ ಬದುಕಿನ ದರ್ಶನವಾಯಿತು. ವಿಮಾನದ ಮೂಲಕ ಊರಿಗೆ ಬಂದು ತಲುಪಿ ಸಿಕ್ಕ ರಜೆ ಅನುಭವಿಸಲು ಅವಕಾಶವಿತ್ತು. ಆದರೆ, ಸೈಕಲ್ ಕೊಟ್ಟ ಅನುಭವ ವರ್ಣಿಸಲು ಸಾಧ್ಯವಿಲ್ಲ.

47 ವರ್ಷ ಆಗಿದ್ದರೂ, ನನ್ನ ಆರೋಗ್ಯ ಹಾಗೂ ದೈಹಿಕ ದೃಢತೆಗೆ ಸೈಕಲ್ ಸವಾರಿಯೇ ಕಾರಣ. ಮೊಹಾಲಿಯಲ್ಲೂ ವಾರಾಂತ್ಯದಲ್ಲಿ ಸಮಾನ ಮನಸ್ಕರೊಂದಿಗೆ ಸೈಕಲ್ ಸವಾರಿ ಮಾಡುವುದು ನನ್ನ ಪ್ರವೃತ್ತಿಯಾಗಿದೆ. ಶಿಮ್ಲಾ ಹಾಗೂ ಹಿಮಾಚಲ ಸೇರಿ ಹಲವು ಕಡೆ ಸೈಕ್ಲಿಂಗ್ ನಡೆಸಿದ್ದೇನೆ. ರಜಾ ನಿರ್ಬಂಧವಿರುವುದರಿಂದ ಸೈಕಲ್ಲನ್ನು ಇಲ್ಲಿಯೇ ಬಿಟ್ಟು ವಿಮಾನ ಹತ್ತಬೇಕಾಗಿದೆ. ಇಲ್ಲದಿದ್ದರೆ ಈ ಕಡೆಯಿಂದಲೂ ಸೈಕಲ್‌ನಲ್ಲಿಯೇ ಹೋಗುತ್ತಿದ್ದೆ ಎಂದು ತಿಳಿಸಿದ್ದಾರೆ.

ಸೈಕಲ್ ಸವಾರಿ ಆರಂಭ : ಸೆ.18ರಂದು ಮೊಹಾಲಿ ನಿವಾಸದಿಂದ ಸವಾರಿ ಆರಂಭಿಸಿದ ಇವರು ಬರೋಬ್ಬರಿ 16 ದಿನದ ನಂತರ ಆ.3ರಂದು ಸ್ವಗ್ರಾಮ ಕಳ್ಳಿಹೊಸೂರಿಗೆ ಆಗಮಿಸಿದ್ದಾರೆ. ದಿನಕ್ಕೆ 150 ಕಿ.ಮೀ.ನಂತೆ 2,400ಕ್ಕೂ ಹೆಚ್ಚು ಕಿ.ಮೀ. ಕ್ರಮಿಸಿದ್ದಾರೆ. ಪಂಜಾಬ್‌ನಿಂದ ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರದ ಮೂಲಕ ಕರ್ನಾಟಕ ಪ್ರವೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net