

ಬೆಳಗಾವಿ: ಶಹಾಪುರದ ಬ್ಯಾಂಕ್ ಆಫ್ ಇಂಡಿಯಾ ವೃತ್ತದಿಂದ ಹಳೆಯ ಪಿ.ಬಿ.ರಸ್ತೆಯವರೆಗೆ ರಸ್ತೆ ಅಗಲೀಕರಣದಲ್ಲಿ ಖಾಸಗಿ ವ್ಯಕ್ತಿಯು ತನ್ನ ಜಾಗ ಕಳೆದುಕೊಳ್ಳುವ ಹಾಗೆ ಮಾಡಿದ ಮಾಸ್ಟರ್ ಮೈಂಡ್ ಯಾರು ಎನ್ನುವ ಕುರಿತು ತನಿಖೆ ನಡೆಸಬೇಕು ಹಾಗೂ ಬೆಳಗಾವಿ ಮಹಾನಗರ ಪಾಲಿಕೆಯನ್ನು ಉಳಿಸುವ ನಿಟ್ಟಿನಲ್ಲಿ ನಾವು ‘ಸೇವ್ ಬೆಳಗಾವಿ ಮಹಾನಗರ ಪಾಲಿಕೆ’ ಎಂಬ ಅಭಿಯಾನ ಹಮ್ಮಿಕೊಳ್ಳುತ್ತೇವೆ ಎಂದು ಸಾಮಾಜಿಕ ಕಾರ್ಯಕರ್ತ ಸುಜಿತ ಮುಳಗುಂದ ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಹಾಪುರದ ಬ್ಯಾಂಕ್ ಆಫ್ ಇಂಡಿಯಾ ವೃತ್ತದಿಂದ ಹಳೆಯ ಪಿ.ಬಿ.ರಸ್ತೆಯವರೆಗೆ ಅಗಲೀಕರಣದಲ್ಲಿ ಜಾಗ ಕಳೆದುಕೊಂಡವರಿಗೆ ಪರಿಹಾರಕ್ಕಾಗಿ ಬೆಳಗಾವಿ ಮಹಾನಗರ ಪಾಲಿಕೆಯಿಂದ 20 ಕೋಟಿ ರೂ. ಠೇವಣಿ ಇರಿಸಿಕೊಳ್ಳುವಂತೆ ಕೋರ್ಟ್ ಆದೇಶಿಸಿದೆ.
ಆದೇಶಕ್ಕೆ ತಲೆಬಾಗಬೇಕು. ಆದರೆ, ಬೆಳಗಾವಿ ಮಹಾನಗರ ಪಾಲಿಕೆಗೆ ಪ್ರತಿ ತಿಂಗಳು 9 ಕೋಟಿ ರೂ. ಅಗತ್ಯವಿದೆ. 20 ಕೋಟಿ ರೂ. ಪಾಲಿಕೆ ಖಜಾನೆಯಿಂದ ಹೊರ ಹೋಗುತ್ತಿದೆ. ಅದರ ಪರಿಹಾರವಾಗಿ ಅಮಾಯಕ ನಗರದ ನಾಗರಿಕರ ಮೇಲೆ ತೆರಿಗೆ ಭಾರ ಹೆಚ್ಚಳ ಆಗುವುದು ಗ್ಯಾರಂಟಿ ಆಗಿದೆ. ಎಲ್ಲ ಹಣವನ್ನು ಪರಿಹಾರಕ್ಕೆ ಕೊಟ್ಟರೆ ಪಾಲಿಕೆಗೆ ಬೀಗ ಹಾಕುವ ಪರಿಸ್ಥಿತಿ ನಿರ್ಮಾಣವಾಗುವುದು ನಿಶ್ಚಿತ. ಹೀಗಾಗಿ ನಾವು ಬೆಳಗಾವಿ ಮಹಾನಗರ ಪಾಲಿಕೆ ಉಳಿಸಿ ಎಂಬ ಅಭಿಯಾನ ಕೈಗೊಂಡು ನಾಗರಿಕರನ್ನು ಜಾಗೃತ ಮಾಡುತ್ತಿದ್ದೇವೆ ಎಂದರು.
ಈ ರಸ್ತೆ ಅಗಲೀಕರಣ ಪ್ರಕರಣದಲ್ಲಿ ಸ್ಮಾರ್ಟ್‌ಸಿಟಿಯಿಂದ ಒತ್ತಾಯ ಪೂರ್ವಕವಾಗಿ ರಸ್ತೆ ನಿರ್ಮಾಣ ಮಾಡಿಸಿದ ಮಾಸ್ಟರ್‌ಮೈಂಡ್ ಯಾರು? ರಸ್ತೆ ನಿರ್ಮಾಣ ಮಾಡಿ ಎಂದ ವ್ಯಕ್ತಿ ಯಾರು ಎನ್ನುವುದನ್ನು ತನಿಖೆ ಮಾಡಿಸಬೇಕು. ಪೊಲೀಸ್ ದೂರು ದಾಖಲಿಸಿ, ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ಮತ್ತು ಇಲಾಖಾವಾರು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಬೆಳಗಾವಿ ಮಹಾನಗರ ಪಾಲಿಕೆ ಈಗಾಗಲೇ ಸಾರ್ವಜನಿಕರ ತೆರಿಗೆ ಹೆಚ್ಚು ಮಾಡಿದ್ದಾರೆ. ಇಂತಹ ಪ್ರಕರಣಗಳಿಗೆ ಹಣ ತುಂಬುವುದು ನಗರದ ಜನರ ಮೇಲೆ ಹೊರೆ ಹಾಕಿವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಕೀಲ ನಿತಿನ್ ಬೋಳಬಂದಿ ಮಾತನಾಡಿ, ಪಾಲಿಕೆ ಅಧಿಕಾರಿಗಳು ಪ್ರಕರಣ ಇಷ್ಟು ದೀರ್ಘಕ್ಕೆ ಹೋಗಲು ಬಿಡಬಾರದಿತ್ತು. ಇಷ್ಟು ದೊಡ್ಡ ಮೊತ್ತದ ಪರಿಹಾರ ನೀಡುವುದನ್ನು ತಪ್ಪಿಸಿಕೊಳ್ಳುವುದಕ್ಕೆ ಪಾಲಿಕೆ ಅಧಿಕಾರಿಗಳಿಗೆ ಬಹಳಷ್ಟು ಅವಕಾಶಗಳಿದ್ದವು. ಪ್ರಕರಣದಲ್ಲಿ ಯಾವೆಲ್ಲ ಅಧಿಕಾರಿಗಳ ತಪ್ಪಿತಸ್ಥರಾಗಿದ್ದಾರೆಯೋ ಅಂತಹ ಅಧಿಕಾರಿಗಳಿಂದಲೇ ಪರಿಹಾರದ ಮೊತ್ತ ತುಂಬಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.